ಕಲಬುರಗಿ : ಕರ್ನಾಟಕದ ಜಾನಪದ ಸಂಪತ್ತು ಅತ್ಯಂತ ಶ್ರೀಮಂತವಾಗಿದ್ದು, ತಲೆತಲಾಂತರಗಳಿಂದ ಬೆಳೆದು ಬಂದಿರುವ ವೈವಿಧ್ಯಮಯ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.

ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ಜಾನಪದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರ ಬದುಕು, ಸಂಸ್ಕೃತಿ, ಜೀವನ ವಿಧಾನ ಮತ್ತು ಭಾವನೆಗಳನ್ನು ಪ್ರತಿಬಿಂಬಿಸುವ ಜಾನಪದ ಕಲೆಗಳು ಕೇವಲ ಮನರಂಜನೆಗೆ ಸೀಮಿತವಲ್ಲ; ಅವು ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿ, ಕಲೆಯನ್ನು ಸಂರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಅವುಗಳನ್ನು ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ವೇದಿಕೆಗಳಲ್ಲಿ ಮಾತ್ರ ನೋಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಲಯದ ಜಂಟಿ ನಿರ್ದೇಶಕ ಬಸವರಾಜ ಹೂಗಾರ್ ಮಾತನಾಡಿ, ಜಾನಪದ ಕಲೆಗಳು ಸಮಾಜದೊಂದಿಗೆ ನಿರಂತರವಾಗಿ ಬೆಸೆದುಕೊಳ್ಳಬೇಕು. ಜಾತಿ ಆಧಾರಿತ ವಿಭಜನೆಯಿಂದ ಜಾನಪದ ಕಲೆಗಳು ಕೆಲವೊಮ್ಮೆ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗುತ್ತಿವೆ. ಜಾನಪದವನ್ನು ವರ್ತಮಾನದೊಂದಿಗೆ ಅನುಸಂಧಾನಗೊಳಿಸುವುದು ಅಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಜಾನಪದ ನಮ್ಮ ಬದುಕಿನ ಭಾಗವಾಗಿದ್ದರೂ, ಕಲಾವಿದರನ್ನು ಸಾಮಾಜಿಕ ವರ್ಗಗಳ ಆಧಾರದ ಮೇಲೆ ನೋಡುವ ಮನೋಭಾವ ಬದಲಾಗಬೇಕು. ಗ್ರಾಮೀಣ ಕಲಾವಿದರನ್ನು ಗೌರವಿಸಿ ಅವರ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕೆಂದರು.

ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಡಾ. ಎಂ.ಬಿ. ಕಟ್ಟಿ ಅವರು ಕಲ್ಯಾಣ ಕರ್ನಾಟಕ ಜನಪದ ಸಾಹಿತ್ಯ, ಡಾ. ಸುಜಾತಾ ಚಲವಾದಿ ಅವರು ಕಿತ್ತೂರು ಕರ್ನಾಟಕ ಜನಪದ ಸಾಹಿತ್ಯ ಹಾಗೂ ಡಾ. ಶ್ರೀಶೈಲ ನಾಗರಾಳ ಅವರು ದಕ್ಷಿಣ ಕರ್ನಾಟಕ ಜಾನಪದ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿದ್ವಾಂಸರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ನಮ್ರತಾ, ಸಿಂಡಿಕೇಟ್ ಸದಸ್ಯೆ ಡಾ. ಶ್ರೀದೇವಿ ಕಟ್ಟಿಮನಿ, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ. ಸುರೇಶ ಜಂಗೆ ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ-ಸಂಚಾಲಕ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂದರ್ಶಕ ಪ್ರಾಧ್ಯಾಪಕ ಡಾ. ಸೂರ್ಯಕಾಂತ್ ಸುಜ್ಯಾತ್, ಸಾಹಿತಿ ಸುಜಾತ ಚಲುವಾದಿ, ಹಿರಿಯ ಜಾನಪದ ವಿದ್ವಾಂಸ ಎ.ಕೆ. ರಾಮೇಶ್ವರ ಸೇರಿದಂತೆ ಕಲಾ ನಿಕಾಯದ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಗೀತ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಜಯ ದಾನಮ್ಮ ಹಾಗೂ ಸಂಗಡಿಗರು ನಾಡಗೀತೆ ಮತ್ತು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಹಣಮಂತ ಮೇಲಕೇರಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor