ಕಮಲಾಪುರ | ಮೂಲಸೌಕರ್ಯ ಸಮಸ್ಯೆ ಖಂಡಿಸಿ ಪಟ್ಟಣ ಪಂಚಾಯತ್ಗೆ ಬೀಗ ಜಡಿದು ಪ್ರತಿಭಟನೆ
ಕಮಲಾಪುರ : ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ದುರಸ್ತಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಸಾರ್ವಜನಿಕರು ಕಮಲಾಪುರ ಪಟ್ಟಣ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ಹಲವು ವಾರ್ಡ್‌ಗಳಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕಲುಷಿತವಾಗಿದ್ದು, ದುರ್ವಾಸನೆ ಬರುತ್ತಿದೆ. ಸಮರ್ಪಕ ಶುದ್ಧೀಕರಣವಿಲ್ಲದೆ ನೀರು ಪೂರೈಕೆಯಾಗುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕಲುಷಿತ ನೀರು ಬಳಸಿದ ಪರಿಣಾಮ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಬೆಳಕೊಟ್ಟಾ ಡ್ಯಾಂನಿಂದ ಪಟ್ಟಣಕ್ಕೆ ಪೂರೈಕೆಯಾಗುವ ನೀರನ್ನು ಶುದ್ಧೀಕರಿಸುವ ಫಿಲ್ಟರ್ ಘಟಕ ಹಾಳಾಗಿದ್ದು, ಅದನ್ನು ದುರಸ್ತಿಪಡಿಸದ ಕಾರಣ ಶುದ್ಧೀಕರಣವಾಗದ ನೀರೇ ಮನೆಗಳಿಗೆ ತಲುಪುತ್ತಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಅನೇಕ ವಿದ್ಯುತ್ ಕಂಬಗಳಲ್ಲಿನ ಬೀದಿ ದೀಪಗಳು ಕೆಟ್ಟುಹೋಗಿದ್ದರೂ ಅವುಗಳನ್ನು ದುರಸ್ತಿಪಡಿಸಲಾಗಿಲ್ಲ. ರಾತ್ರಿ ವೇಳೆ ಸಾರ್ವಜನಿಕರು ಕತ್ತಲಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ತಕ್ಷಣ ಬೀದಿ ದೀಪಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಭಾನುವಾರ ನಡೆಯುವ ಕಮಲಾಪುರ ಸಂತೆಗೆ ಸಾವಿರಾರು ಜನರು ಆಗಮಿಸುತ್ತಾರೆ. ಸಂತೆ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಕಳೆದ ಆರು ತಿಂಗಳಿಂದ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಾರ್ವಜನಿಕರ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸದೆ ಹೊಸ ಬಡಾವಣೆಗಳ ಕಾಮಗಾರಿ ಹಾಗೂ ಖಾತೆ ಬದಲಾವಣೆ ಸೇರಿದಂತೆ ಇತರೆ ಆಡಳಿತಾತ್ಮಕ ಕೆಲಸಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣವೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ರಾoಪೂರೆ, ದಾಸಿಮಯ್ಯ ವಡ್ಡಣಕೇರಿ, ಬಸವರಾಜ ಸೂಗುರ, ವಿಜಯಕುಮಾರ ಮಾಟೂರ, ಅಣ್ಣಪ್ಪ ಪೂಜಾರಿ, ಶರಣು ಕುಂಬಾರ, ಸಂತೋಷ ಪವಾರ, ಥಾವರ್ ಗಿರಿ ತಾಂಡಾ, ಸುಭಾಷ್ ಪಂಚಾಳ, ಸಂತೋಷ ಮುಗಳಿ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.