Kalaburagi | ಮನಸ್ಸನ್ನು ಅರಿತುಕೊಳ್ಳುವುದು ಮಾನಸಿಕ ಆರೋಗ್ಯದ ಮೊದಲ ಹೆಜ್ಜೆ: ಯೋಗೇಶ್ ಮಾಸ್ಟರ್
‘ಯುವ ಮನೋತ್ಸವ–ಮನಸ್ಸು ಮಾತನಾಡಲಿ, ನೋವು ಮಾಯವಾಗಲಿ’ ಕಾರ್ಯಕ್ರಮ
ಕಲಬುರಗಿ : ಇತರರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಳ್ಳುವ ಪ್ರಯತ್ನವೇ ಮಾನಸಿಕ ಆರೋಗ್ಯದ ಪ್ರಮುಖ ಹೆಜ್ಜೆಯಾಗಿದೆ ಎಂದು ಸಾಹಿತಿ ಹಾಗೂ ಆಪ್ತ ಸಮಾಲೋಚಕ ಯೋಗೇಶ್ ಮಾಸ್ಟರ್ ಹೇಳಿದರು.
ನಗರದ ರೇಷ್ಮಿ ವಿದ್ಯಾಭವನದಲ್ಲಿ ಕಲಬುರಗಿ ಸಂವಾದ ಯುವ ಸಂಪನ್ಮೂಲ ಕೇಂದ್ರದ ವತಿಯಿಂದ ರೇಷ್ಮೆ ಶಿಕ್ಷಣ ಸಂಸ್ಥೆ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಯುವ ಮನೋತ್ಸವ – ಮನಸ್ಸು ಮಾತನಾಡಲಿ, ನೋವು ಮಾಯವಾಗಲಿ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಯುವಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೊದಲು ತಮ್ಮೊಳಗೆ ನಡೆಯುತ್ತಿರುವ ಭಾವನಾತ್ಮಕ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಬೇಕು. ಕೋಪ, ದುಃಖ, ಭಯ, ಆತಂಕ, ನಿರಾಶೆ ಹಾಗೂ ಒಂಟಿತನದಂತಹ ಭಾವನೆಗಳನ್ನು ಒತ್ತಿಹಾಕುವ ಬದಲು ಅವುಗಳನ್ನು ಗುರುತಿಸಿ ಅರ್ಥೈಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
“ನಾನು ಏನು ಅನುಭವಿಸುತ್ತಿದ್ದೇನೆ? ಈ ನೋವು ಏಕೆ ಉಂಟಾಗಿದೆ? ನನಗೆ ನಿಜವಾಗಿ ಏನು ಬೇಕು?” ಎಂಬ ಪ್ರಶ್ನೆಗಳನ್ನು ನಮ್ಮೊಳಗೆ ನಾವೇ ಕೇಳಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡರೆ ಸ್ವಯಂ ಅರಿವು ಹೆಚ್ಚುತ್ತದೆ. ಸ್ವಯಂ ಅರಿವು ಹೆಚ್ಚಿದಂತೆ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವೂ ವೃದ್ಧಿಸುತ್ತದೆ ಎಂದು ತಿಳಿಸಿದರು.
ಇತರರ ವರ್ತನೆಗೆ ತಕ್ಷಣವೇ ಅರ್ಥ ಕಲ್ಪಿಸುವುದು ಅಥವಾ ಅವರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಊಹಿಸುವುದು ಅನೇಕ ಬಾರಿ ತಪ್ಪು ಗ್ರಹಿಕೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರ ಅನುಭವ ಮತ್ತು ಮನಸ್ಥಿತಿ ವಿಭಿನ್ನವಾಗಿರುವುದರಿಂದ ಮೊದಲು ನಮ್ಮ ಭಾವನೆಗಳನ್ನು ಗುರುತಿಸಿ ನಂತರ ಇತರರೊಂದಿಗೆ ಸಂವಹನ ನಡೆಸುವುದು ಅಗತ್ಯ ಎಂದು ಹೇಳಿದರು.
ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡುವುದು ಅಥವಾ ಏಕಾಂಗಿಯಾಗಿ ಎದುರಿಸುವುದಕ್ಕಿಂತ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತನಾಡಬೇಕು. ಅಗತ್ಯವಿದ್ದಲ್ಲಿ ಆಪ್ತ ಸಮಾಲೋಚಕರು ಅಥವಾ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯಬೇಕು. ಸಹಾಯ ಕೇಳುವುದು ದುರ್ಬಲತೆಯಲ್ಲ ಎಂಬ ಮನೋಭಾವ ಯುವಜನರಲ್ಲಿ ಬೆಳೆಯಬೇಕು ಎಂದು ಯೋಗೇಶ್ ಮಾಸ್ಟರ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ‘ಮಾನಸಿಕ ಆರೋಗ್ಯ ಮತ್ತು ಯುವಜನರ ಸಮಕಾಲೀನ ಸವಾಲುಗಳು’, ‘ಯುವಜನರು ಮತ್ತು ಖಿನ್ನತೆ’, ‘ಆತ್ಮಹತ್ಯೆ ಕುರಿತು ಒಂದು ಕಣ್ಣೋಟ’ ವಿಷಯಗಳ ಕುರಿತು ವಿಚಾರ ಸಂಕಿರಣ ನಡೆಯಿತು. ಸಂವಾದ ಒಡನಾಡಿಗಳಿಂದ ಅನುಭವ ಹಂಚಿಕೆ, ಭಾಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಮಾಣಪತ್ರ ಮತ್ತು ಬಹುಮಾನ ವಿತರಣೆ ಸಹ ನಡೆಯಿತು.
ಸಂವಾದ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಮಹದೇವ ಮೂಲಗೆ ಶ್ಲಾಘಿಸಿದರು. ಶರಣೇಶ್ವರಿ ರೇಷ್ಮೆ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಗೀತಾ ಆರ್.ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಯಾನ ಮತ್ತು ಬದುಕು ಕಮ್ಯುನಿಟಿ ಕಾಲೇಜು ಹಾಗೂ ಸಂವಾದ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಡಾ. ಮುರಳಿ ಮೋಹನ್ ಕಾಟಿ, ಸಂಸ್ಥೆಯ ಪ್ರೋಗ್ರಾಂ ಲೀಡ್ ಇಳಂಗೋ ಸ್ಥಾನಿಸ್ಥಾಸ್, ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆಯ ಅಲ್ಪಾದೇವಿದಾಸ್, ಸಂವಾದ ಕೇಂದ್ರದ ನಾಗೇಶ್ ಹರಳಯ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ, ಕೇದರ ಅವರು ವೇದಿಕೆಯಲ್ಲಿ ಇದ್ದರು. ಮಲ್ಲಿಕಾರ್ಜುನ ಸ್ವಾಗಿತಿಸಿದ್ದರು. ಕೀರ್ತಿ ಅವರು ನಿರೂಪಿಸಿದ್ದರು. ರಾಜಶೇಖರ ವಂದಿಸಿದ್ದರು.