Aland | ರಸ್ತೆ ಅಗಲೀಕರಣ ಕಾಮಗಾರಿಗೆ ವೇಗ; ಬಾಕಿ ಕಟ್ಟಡಗಳ ತೆರವು ಕಾರ್ಯಾಚರಣೆ ಚುರುಕು

Update: 2026-08-08 18:21 IST

ಆಳಂದ: ಪಟ್ಟಣದ ಹಳೆಯ ತಹಸೀಲ್ ಕಚೇರಿಯಿಂದ ದರ್ಗಾ ಚೌಕ್‌ವರೆಗೆ ಸಾಗುವ ಪ್ರಮುಖ ರಸ್ತೆಯ ಅಗಲೀಕರಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ಬಾಕಿ ಕಟ್ಟಡಗಳ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ. ಇನ್ನೆರಡು ದಿನಗಳಲ್ಲಿ ಬಾಕಿ ಉಳಿದಿರುವ ಬಹುತೇಕ ಕಟ್ಟಡಗಳ ತೆರವು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಆಡಳಿತ ಮೂಲಗಳು ತಿಳಿಸಿವೆ.

ತೆರವು ಕಾರ್ಯಾಚರಣೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ಕಳೆದ ಕೆಲ ದಿನಗಳಿಂದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ವಾಹನ ಸವಾರರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ರಸ್ತೆ ಅಭಿವೃದ್ಧಿಯ ಮುಂದಿನ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡಲು ಪುರಸಭೆ ಆಡಳಿತ ಸಜ್ಜಾಗಿದೆ.

ಒಂದು ಕಿ.ಮೀ.ಗೂ ಅಧಿಕ ಉದ್ದದ ಈ ಪ್ರಮುಖ ರಸ್ತೆಯ ಅಗಲೀಕರಣಕ್ಕಾಗಿ ಹಲವು ಹಂತಗಳಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕೆಲ ಆಸ್ತಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಹಾಗೂ ಆಸ್ತಿ ದಾಖಲೆಗಳ ಪರಿಶೀಲನೆ ಸೇರಿದಂತೆ ವಿವಿಧ ಕಾರಣಗಳಿಂದ ಕಾರ್ಯಾಚರಣೆ ಕೆಲಕಾಲ ಸ್ಥಗಿತಗೊಂಡಿತ್ತು. ಇದೀಗ ಆಡಳಿತ ಮತ್ತೆ ಕಾರ್ಯಾಚರಣೆಗೆ ವೇಗ ನೀಡಿದ್ದು, ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಕಟ್ಟಡ, ಗೋಡೆ, ಬಾಗಿಲು ಸೇರಿದಂತೆ ವಿವಿಧ ನಿರ್ಮಾಣಗಳನ್ನು ತೆರವುಗೊಳಿಸಲಾಗುತ್ತಿದೆ.

35 ಕಟ್ಟಡಗಳ ಪೈಕಿ 20 ತೆರವು :

ರಸ್ತೆ ಮಾರ್ಗದಲ್ಲಿ 500ಕ್ಕೂ ಹೆಚ್ಚು ಆಸ್ತಿ ಸಂಖ್ಯೆಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಬಹುತೇಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇತ್ತೀಚೆಗೆ ಬಾಕಿ ಉಳಿದಿದ್ದ ಸುಮಾರು 35 ಕಟ್ಟಡಗಳ ಪೈಕಿ ಶುಕ್ರವಾರ ಹಾಗೂ ಶನಿವಾರ 20 ಕಟ್ಟಡಗಳ ತೆರವು ಕಾರ್ಯ ಪೂರ್ಣಗೊಂಡಿದೆ. ಉಳಿದ ಕಟ್ಟಡಗಳ ಪೈಕಿ ಸುಮಾರು 10 ಕಟ್ಟಡಗಳ ತೆರವು ಕಾರ್ಯ ಭಾನುವಾರ ಅಥವಾ ಸೋಮವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಆಡಳಿತ ಮೂಲಗಳು ತಿಳಿಸಿವೆ.

ಶನಿವಾರ ಮಹಾದೇವ ಮಂದಿರದ ಬಳಿ ಕೆಲವರು ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರೂ, ಆಡಳಿತವು ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ಮುಂದುವರಿಸಿತು.

8 ಜೆಸಿಬಿ, 6 ಹಿಟಾಚಿಗಳ ಬಳಕೆ :

ತೆರವು ಕಾರ್ಯಾಚರಣೆಗೆ ಆಡಳಿತವು ಭಾರಿ ಯಂತ್ರೋಪಕರಣಗಳನ್ನು ನಿಯೋಜಿಸಿದ್ದು, ಶನಿವಾರ 8 ಜೆಸಿಬಿ ಹಾಗೂ 6 ಹಿಟಾಚಿಗಳ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ರಸ್ತೆ ವಿಸ್ತರಣೆಗೆ ಗುರುತಿಸಲಾದ ಪ್ರದೇಶಗಳಲ್ಲಿನ ಕಟ್ಟಡ, ಗೋಡೆ ಹಾಗೂ ಇತರ ನಿರ್ಮಾಣಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಯಿತು.

ಆ. 3ರಂದು ರಸ್ತೆ ಅಗಲೀಕರಣ ಸಮಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡಗಳ ಅನುಭೋಗದಾರರಿಗೆ ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಳ್ಳುವಂತೆ ಸೂಚಿಸಿದ್ದರು. ನಿಗದಿತ ಅವಧಿಯಲ್ಲಿ ತೆರವು ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಆಡಳಿತವು ಯಂತ್ರೋಪಕರಣಗಳ ಮೂಲಕ ಕಾರ್ಯಾಚರಣೆ ಆರಂಭಿಸಿದೆ. ಗುರುವಾರ ಸಂತೆ ಇರುವುದರಿಂದ ಕಾರ್ಯಾಚರಣೆಗೆ ವಿರಾಮ ನೀಡಲಾಗಿದ್ದು, ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿ ಶನಿವಾರ ಮತ್ತಷ್ಟು ಚುರುಕುಗೊಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News