Kalaburagi | ಕಲಾವಿದರು ಸಮಾಜಕ್ಕೆ ಹೊಸತನ, ಅರ್ಥಪೂರ್ಣ ಸಂದೇಶ ನೀಡುತ್ತಾರೆ : ಬಸವರಾಜ ಉಪ್ಪಿನ್

Update: 2026-08-08 18:24 IST

ಕಲಬುರಗಿ: ಕಲೆಯ ಬಗ್ಗೆ ಸಮರ್ಪಣಾ ಮನೋಭಾವ ಹೊಂದಿರುವ ಕಲಾವಿದರು ಎಂದಿಗೂ ಸುಮ್ಮನಿರುವುದಿಲ್ಲ. ಸಮಾಜಕ್ಕೆ ಸದಾ ಹೊಸತನ ಹಾಗೂ ಅರ್ಥಪೂರ್ಣ ಸಂದೇಶ ನೀಡಲು ಅವರು ಪ್ರಯತ್ನಿಸುತ್ತಾರೆ. ಇದಕ್ಕೆ ಬೀದರ್ ಮೂಲದ ಕಲಾವಿದೆ ಕಹಕಶಾನ್ ನಜ್ನೀನ್ ಅವರ ಕಲಾಕೃತಿಗಳೇ ಸಾಕ್ಷಿ ಎಂದು ಹಿರಿಯ ಕಲಾವಿದ ಬಸವರಾಜ ಆರ್. ಉಪ್ಪಿನ್ ಹೇಳಿದರು.

ನಗರದ ಕನ್ನಡ ಭವನದ ಕಲಾ ಸೌಧ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಹಕಶಾನ್ ನಜ್ನೀನ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಕಹಕಶಾನ್ ನಜ್ನೀನ್ ಅವರು ರೂಪಕ ಚಿತ್ರಕಲೆ ಹಾಗೂ ಕ್ಯಾಲಿಗ್ರಫಿ (ಲಿಪಿಕಲೆ) ಎರಡೂ ಪ್ರಕಾರಗಳಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ವಿಭಿನ್ನ ಕಲಾ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಕಲಾ ಪ್ರತಿಭೆಯನ್ನು ಅಭಿವ್ಯಕ್ತಿಪಡಿಸಿರುವುದು ಗಮನಾರ್ಹ ಎಂದು ಉಪ್ಪಿನ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾವಿದ ಹಾಗೂ ಕಲಾ ಇತಿಹಾಸಕಾರ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಮಾತನಾಡಿ, ಕಹಕಶಾನ್ ನಜ್ನೀನ್ ಅವರ ಕ್ಯಾಲಿಗ್ರಫಿ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ದೇಶ-ವಿದೇಶಗಳಲ್ಲಿ ನಡೆದ ಹಲವು ಅಂತಾರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಅವರು ಭಾಗವಹಿಸಿರುವುದು ಅವರ ಕಲೆಗೆ ದೊರೆತ ಜಾಗತಿಕ ಮಾನ್ಯತೆಗೆ ಸಾಕ್ಷಿಯಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೆಗಲತಿಪ್ಪಿ ಮಾತನಾಡಿ, ಕಹಕಶಾನ್ ನಜ್ನೀನ್ ಅವರ ಮಹಿಳಾ ವಿಷಯಾಧಾರಿತ ಚಿತ್ರಕೃತಿಗಳು ಗಮನ ಸೆಳೆಯುತ್ತವೆ. ಮಹಿಳೆಯರ ಸಮಸ್ಯೆಗಳು ಹಾಗೂ ಸಾಮಾಜಿಕ ಪಾತ್ರವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅವರ ಕಲಾಕೃತಿಗಳು ಸಮಾಜಕ್ಕೆ ಬಲವಾದ ಸಂದೇಶ ನೀಡುತ್ತವೆ ಎಂದು ಶ್ಲಾಘಿಸಿದರು.

ಬಹಮನಿ ಫೌಂಡೇಶನ್ ಅಧ್ಯಕ್ಷ ಖಾಜಿ ರಿಜ್ವಾನ್ ಉರ್ ರಹಮಾನ್ ಸಿದ್ದಿಕಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ಕಲಾ ಸೌಧ ಸಂಚಾಲಕ ರೆಹಮಾನ್ ಪಟೇಲ್ ಅತಿಥಿಗಳಾಗಿ ಉಪಸ್ಥಿತರಿದ್ದರು.

ಆ.9ರವರೆಗೆ ಪ್ರದರ್ಶನ :

ಕಹಕಶಾನ್ ನಜ್ನೀನ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಆಗಸ್ಟ್ 9ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ. ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಕಲಾ ಸೌಧ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ವೀಕ್ಷಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News