Chitapur | ಸ್ಥಾತಂತ್ರ್ಯ ದಿನಾಚರಣೆಗೆ ಅಧಿಕಾರಿಗಳು ಗೈರಾದರೆ ಕ್ರಮ ಕೈಗೊಳ್ಳಲಾಗುವುದು : ಹಿರೇಮಠ
ಚಿತ್ತಾಪುರ: ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ತಾಲೂಕು ಆಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಯಾವುದೇ ಅಧಿಕಾರಿಗಳು ಗೈರಾಗಬಾರದು. ಗೈರಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರಜಾಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆ.15ರಂದು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 8.30ರೊಳಗೆ ಧ್ವಜಾರೋಹಣ ನೆರವೇರಿಸಬೇಕು. ಬಳಿಕ ಬೆಳಗ್ಗೆ 9 ಗಂಟೆಗೆ ಪ್ರಜಾಸೌಧದಲ್ಲಿ ನಡೆಯುವ ಮುಖ್ಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದರು.
ಧ್ವಜಾರೋಹಣದ ಬಳಿಕ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಬಿಇಒ ಶಶಿಧರ್ ಬಿರಾದಾರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ 150ರಿಂದ 200 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತದಿಂದ ಉಪಾಹಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಗ್ರೇಡ್ರಾ-2 ತಹಶೀಲ್ದಾರ್ ರಾಜಕುಮಾರ ಮರತೂರ, ತಾಪಂ ಇಓ ಮಹ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಅಧಿಕಾರಿಗಳಾದ ಡಾ. ಶಂಕರ ಕಣ್ಣಿ, ವಿಜಯಕುಮಾರ್ ಬಡಿಗೇರ್, ಸೈಯದ್ ಅನ್ವರ್, ಸತೀಶ ಕುಮಾರ, ಸಂತೋಷ, ಸೂರ್ಯಕಾಂತ, ಮಲ್ಲಿಕಾರ್ಜುನ ಮಾಲಿ ಪಾಟೀಲ್, ಎಂ.ಡಿ ಜಾವೇದ್, ವನೀತಾ ಸೀತಾಳೆ, ವಿಠಲ್ ಬಿರಾದರ, ಕರಣಕುಮಾರ್, ಸುನೀತಾ, ನರಸಿಂಹಲು, ಉಮೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.