Chitapur | ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ : ವಿಶ್ವಜಿತ್ ಕದಂ
ಚಿತ್ತಾಪುರ: ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಜಿಲ್ಲೆಯಾದ್ಯಂತ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಎಐಸಿಸಿ ವೀಕ್ಷಕ ವಿಶ್ವಜಿತ್ ಕದಂ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಅಪಾರ ಸಂಖ್ಯೆಯ ಮುಖಂಡರು ಮತ್ತು ಕಾರ್ಯಕರ್ತರಿದ್ದಾರೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನಾ ಸೃಜನ್ ಅಭಿಯಾನದ ಮೂಲಕ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರ ಸೇರಿದಂತೆ ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ದೊಡ್ಡ ಕಾರ್ಯಕರ್ತರ ಬಳಗವಿದೆ. ಬೆಳೆಯುವ ನಾಯಕರೊಂದಿಗೆ ಇತರರನ್ನು ಬೆಳೆಸುವ ನಾಯಕರೂ ಇದ್ದಾರೆ. ಆದ್ದರಿಂದ ಜಿಲ್ಲೆಯ ಪ್ರತಿಯೊಂದು ತಾಲೂಕು ಹಾಗೂ ಬ್ಲಾಕ್‌ಗಳಿಗೆ ತೆರಳಿ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರತಿಯೊಂದು ಕ್ಷೇತ್ರಕ್ಕೆ ತೆರಳಿ ಜನಪ್ರತಿನಿಧಿಗಳು, ಶಾಸಕರು, ಸಚಿವರು, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆಯಲಾಗುವುದು. ಆಗಸ್ಟ್ 15ರೊಳಗೆ ಆಕಾಂಕ್ಷಿಗಳ ಅಂತಿಮ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗುವುದು. ಬಳಿಕ ಹೈಕಮಾಂಡ್ ಯಾರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತದೆಯೋ, ಪಕ್ಷದ ಪ್ರತಿಯೊಬ್ಬರೂ ಆ ನಿರ್ಧಾರಕ್ಕೆ ಬದ್ಧರಾಗಬೇಕು ಎಂದು ವಿಶ್ವಜಿತ್ ಕದಂ ಹೇಳಿದರು.
ಈ ಸಂದರ್ಭದಲ್ಲಿ ಎಂಎಲ್‌ಸಿ ಜಗದೇವ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹಾಗೂ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ್, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ್ ಸಾಹೇಬ್, ಶಿವಾನಂದ ಪಾಟೀಲ್, ಶಿವರುದ್ರ ಭೀಣಿ, ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ನಾಮದೇವ ರಾಠೋಡ, ಅಜೀಜ್ ಸೇಠ್, ಶ್ರೀನಿವಾಸ ಸಗರ, ಜಗಣ್ಣಗೌಡ, ವೀರಣ್ಣಗೌಡ, ಮಲ್ಲಪ್ಪ ಹೊಸ್ಮನಿ, ದೇವು ಯಾಬಾಳ, ನಾಗರೆಡ್ಡಿ ಗೋಪಸೇನ್, ನಿಂಗಣ್ಣ ಹೇಗಲೇರಿ, ದೇವಿಂದ್ರ ಅಣಕಲ್, ರಸೂಲ್ ಮುಸ್ತಫಾ, ಎಂ.ಎ ರಶೀದ್, ಜಫರುಲ್ ಹಸನ್, ವೆಂಕಟೇಶ ಕುಲಕರ್ಣಿ, ಶೇಖ ಬಬ್ಲು, ನಯೀಮ್, ವಿನ್ನು ಜೆ.ಡಿ, ರವಿ ಸಾಗರ, ಶರಣು ಡೋಣಗಾಂವ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.