ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: 24 ಗಂಟೆ ನಿಗಾ, 144 ಮತಗಟ್ಟೆಗಳ ಸ್ಥಾಪನೆ: ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್
ಕಲಬುರಗಿ: ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದ್ದು, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಮತದಾನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ಷೇತ್ರದಾದ್ಯಂತ ವಿವಿಧ ತಂಡಗಳನ್ನು ರಚಿಸಿ, 24 ಗಂಟೆಗಳ ಕಾಲ ನಿರಂತರ ನಿಗಾ ಇರಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಝಹೀರಾ ನಸೀಮ್ ತಿಳಿಸಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳು ಉಳಿದಿದ್ದಾರೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಈ ಎಲ್ಲ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೆಲೆನ್ಸ್, ವಿಡಿಯೋ ಸರ್ವೆಲೆನ್ಸ್, ವಿಡಿಯೋ ವೀಕ್ಷಣೆ, ಮಾದರಿ ನೀತಿ ಸಂಹಿತೆ ಅನುಷ್ಠಾನ, ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಹಾಗೂ ದೂರು ಮೇಲ್ವಿಚಾರಣಾ ತಂಡಗಳನ್ನು ರಚಿಸಲಾಗಿದೆ. ಸ್ಥಳೀಯವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೆಕ್ಟರ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದರು.
ಚುನಾವಣೆಗೆ ಸಂಬಂಧಿಸಿದ ವಿವಿಧ ಪರವಾನಗಿಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ನೀಡಲಾಗುತ್ತದೆ. ಇಡೀ ಕ್ಷೇತ್ರಕ್ಕೆ ಅನ್ವಯಿಸುವ ಪ್ರಚಾರ ವಾಹನಗಳ ಪರವಾನಗಿಯನ್ನು ಮಾತ್ರ ಚುನಾವಣಾಧಿಕಾರಿಗಳ ಕಚೇರಿಯಿಂದ ನೀಡಲಾಗುವುದು. ಅಕ್ಟೋಬರ್ 23ರಂದು ನಡೆಯುವ ಮತದಾನ ಹಾಗೂ ಅಕ್ಟೋಬರ್ 27ರಂದು ನಡೆಯುವ ಮತ ಎಣಿಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಮಿತಿ ಇಲ್ಲ. ಆದರೆ, ಮತದಾರರಿಗೆ ಹಣದ ಆಮಿಷವೊಡ್ಡುವುದು ಅಥವಾ ಹಣ ಹಂಚಿಕೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
34,784 ಮತದಾರರು: ಕಲಬುರಗಿಯಲ್ಲಿ ಅತಿ ಹೆಚ್ಚು
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 34,784 ಮತದಾರರು ನೋಂದಣಿಯಾಗಿದ್ದಾರೆ. ಇವರಲ್ಲಿ 20,040 ಪುರುಷರು ಹಾಗೂ 14,744 ಮಹಿಳೆಯರಿದ್ದಾರೆ. ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 10,652 ಮತದಾರರಿದ್ದು, ಯಾದಗಿರಿ ಜಿಲ್ಲೆಯಲ್ಲಿ ಅತಿ ಕಡಿಮೆ 2,259 ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.
ಏಳು ಜಿಲ್ಲೆಗಳಲ್ಲಿ 144 ಮತಗಟ್ಟೆಗಳು:
ಅಕ್ಟೋಬರ್ 23ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ 14 ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದು. ಕಲಬುರಗಿ – 40, ಬೀದರ್ – 33, ಕೊಪ್ಪಳ – 20, ವಿಜಯನಗರ – 18, ರಾಯಚೂರು – 16, ಬಳ್ಳಾರಿ – 9, ಯಾದಗಿರಿ – 8 ಮತಗಟ್ಟೆಗಳಿವೆ.
ಒಟ್ಟು 144 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತ ಎಣಿಕೆಯ ಪ್ರತಿ ಟೇಬಲ್‌ಗೆ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗುವುದು. ಚುನಾವಣಾ ಸಿಬ್ಬಂದಿಗೆ ಮೊದಲ ಹಂತದ ತರಬೇತಿಯನ್ನು ಅಕ್ಟೋಬರ್ 12ರಂದು ಹಾಗೂ ಎರಡನೇ ಹಂತದ ತರಬೇತಿಯನ್ನು ಅಕ್ಟೋಬರ್ 17ರಂದು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದೆ. ಮತದಾನ ಕೇಂದ್ರಗಳ ಒಳಗೆ ಮತ್ತು ಹೊರಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮತ ಎಣಿಕೆಯು ಅಕ್ಟೋಬರ್ 27ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಹಾಲ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ಮತಪತ್ರದ ಮೂಲಕ ಪ್ರಾಶಸ್ತ್ಯ ಮತ ಚಲಾಯಿಸಲು ಅವಕಾಶವಿದ್ದು, ನೋಟಾ ಆಯ್ಕೆ ಇರುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತದಾರರು ತಮ್ಮ ಪ್ರಾಶಸ್ತ್ಯದ ಅನುಸಾರ ಮತ ನೀಡಬಹುದು.
ಮತಪತ್ರದಲ್ಲಿ ಪ್ರಾಶಸ್ತ್ಯ ಸೂಚಿಸುವಾಗ ಮೊದಲ ಪ್ರಾಶಸ್ತ್ಯಕ್ಕೆ ‘1’ ಎಂದು ಕ್ರಮಬದ್ಧವಾಗಿ ಅಂಕಿಗಳನ್ನು ನಮೂದಿಸಬೇಕು. ಪ್ರಾಶಸ್ತ್ಯದ ಕ್ರಮದಲ್ಲಿ ಅಂಕಿಗಳನ್ನು ನಮೂದಿಸದೆ ಬಿಡುವುದು ಅಥವಾ ನಿಯಮಾನುಸಾರವಲ್ಲದ ರೀತಿಯಲ್ಲಿ ಮತ ಚಲಾಯಿಸುವುದರಿಂದ ಮತ ಅಮಾನ್ಯವಾಗುವ ಸಾಧ್ಯತೆಯಿದೆ. ಆದ್ದರಿಂದ ಮತದಾರರು ಈ ಕುರಿತು ವಿಶೇಷ ಎಚ್ಚರಿಕೆ ವಹಿಸಬೇಕು. ಮತ ಚಲಾಯಿಸಲು ಚುನಾವಣಾ ಆಯೋಗ ಒದಗಿಸುವ ನೇರಳೆ ಬಣ್ಣದ (ವಯಲೆಟ್) ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು. ಬೇರೆ ಬಣ್ಣದ ಪೆನ್ನು ಬಳಸಿದರೆ ಅಥವಾ ಮತಪತ್ರದಲ್ಲಿ ಗುರುತುಗಳನ್ನು ಮಾಡಿದರೆ ಅಂತಹ ಮತಗಳು ಅಮಾನ್ಯವಾಗುವ ಸಾಧ್ಯತೆಯಿದೆ ಎಂದು ಝಹೀರಾ ನಸೀಮ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮತ್ತು ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಪ್ರಮೀಳಾ ಎಂ.ಕೆ. ಉಪಸ್ಥಿತರಿದ್ದರು.