KEA ಕೃಷಿ ವಿಜ್ಞಾನ ಕೋರ್ಸ್ ಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಅಕ್ರಮ ಆರೋಪ: ಮರು ಪರೀಕ್ಷೆಗೆ ಆಗ್ರಹ
ಬೀದರ್ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಕೃಷಿ ವಿಜ್ಞಾನ ಕೋರ್ಸ್ ಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದ್ದು, ನೋಂದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕುಲಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಗಿದೆ. ಬೀದರ್ ನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೇ.10ರಂದು ನಡೆದ ಪ್ರವೇಶ ಪರೀಕ್ಷೆಗೆ ಒಟ್ಟು 995 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 752 ವಿದ್ಯಾರ್ಥಿಗಳ ಅರ್ಜಿಗಳು ಮಾತ್ರ ಸ್ವೀಕೃತಗೊಂಡಿವೆ. ಬಳಿಕ ಕೆಇಎ ಪ್ರಾಧಿಕಾರವು ಮೇ.1ರಿಂದ 4ರವರೆಗೆ ಲೋಪದೋಷಗಳನ್ನು ಸರಿಪಡಿಸಲು ಅವಕಾಶ ನೀಡಿತ್ತು. ವಿದ್ಯಾರ್ಥಿಗಳು ಮರು ಅರ್ಜಿ ಸಲ್ಲಿಸಿದರೂ ಸಹ ಆ ಅರ್ಜಿಗಳು ತಿರಸ್ಕೃತಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ.
ಇದೇ ವೇಳೆ ರಾಜ್ಯದ 17 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪರೀಕ್ಷಾ ಕೇಂದ್ರ-1ರಲ್ಲಿ 74 ವಿದ್ಯಾರ್ಥಿಗಳು 200ಕ್ಕೆ 200 ಪೂರ್ಣ ಅಂಕಗಳನ್ನು ಪಡೆದಿರುವುದು ಸಂಶಯಕ್ಕೆ ದಾರಿಮಾಡಿಕೊಟ್ಟಿದೆ. ಉಳಿದ 16 ಕೇಂದ್ರಗಳಲ್ಲಿ ಕೇವಲ 24 ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಕೃಷಿ ಹಾಗೂ ರೈತ ಕುಟುಂಬಗಳ ಮಕ್ಕಳಿಗೆ ಮೀಸಲಾದ 50% ಸೀಟುಗಳ ಹಂಚಿಕೆಗಾಗಿ ಈ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆಯಲ್ಲಿ ತೋಟಗಾರಿಕೆ, ಕೃಷಿ ಯಂತ್ರೋಪಕರಣ, ಬೀಜ, ಗಿಡಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಭೌತಿಕ ಗುರುತು ಹಾಗೂ ಉತ್ತರಗಳನ್ನು ನೀಡಬೇಕಾಗುತ್ತದೆ. ಪ್ರತಿಯೊಂದು ಕೇಂದ್ರಕ್ಕೂ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಒಂದೇ ಕೇಂದ್ರದಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿರುವುದು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಈಗಾಗಲೇ ಮೇ.10ರಂದು ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪಾಲಕರೊಂದಿಗೆ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಆದ್ದರಿಂದ ತಿರಸ್ಕೃತಗೊಂಡ 243 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಹಾಗೂ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ಅಧ್ಯಕ್ಷ ದಿಲೀಪಕುಮಾರ್ ವರ್ಮಾ, ಶ್ರೀಕಾಂತ್ ಸಾಗರ್, ಬಜರಂಗ್ ತಮಗೊಂಡ್, ಅನೀಲಕುಮಾರ್ ಬಾಜಿ, ರಾಜಶೇಖರ್ ಶೇರಿಕಾರ್, ಪೀಟರ್ ಲಾಯನ್, ಮಹೇಂದ್ರ ಕಾಂಬಳೆ, ವಿಠಲರಾವ್ , ಸತೀಶ್ ಭಾವಿಕಟ್ಟಿ, ಬಿ.ನಾಗರೆಡ್ಡಿ, ಪ್ರಜ್ವಲ್, ಶಿವಮಂಗಲಾ ಹಾಗೂ ಆದರ್ಶ ಸೇರಿದಂತೆ ಇತರರು ಉಪಸ್ಥಿತರಿದ್ದರು.