×
Ad

ಕಲ್ಯಾಣ ಕಲ್ಯಾಣ ಮಂಡಳಿ ಕಿಟ್ ಖರೀದಿಯಲ್ಲಿ ಅವ್ಯವಹಾರ ಆರೋಪ : ಕಟ್ಟಡ ಕಾರ್ಮಿಕರ ಪ್ರತಿಭಟನೆ

Update: 2026-07-07 21:51 IST

ಕಲಬುರಗಿ: ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯವ್ಯಾಪಿ ಹೋರಾಟದ ಅಂಗವಾಗಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಗಳವಾರ ನಗರದ ಕಾರ್ಮಿಕ ಇಲಾಖೆ (ಲೇಬರ್ ಆಫೀಸ್) ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಕಲ್ಯಾಣ ಯೋಜನೆಯಡಿ ವಿತರಿಸಲಾಗುತ್ತಿರುವ ಕಿಟ್‌ಗಳ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕಿಟ್ ವಿತರಣೆಯ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ದುರುಪಯೋಗ ನಡೆಯುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕರ ನೈಜ ಅಗತ್ಯಗಳನ್ನು ಕಡೆಗಣಿಸಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯ ಬಳಿಕ ಉಪ ಕಾರ್ಮಿಕ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಕಿಟ್ ಖರೀದಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಹಾಗೂ ಸಂಭವನೀಯ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ (AIUTUC) ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ, ಸಂತೋಷಕುಮಾರ್ ಹಿರವೇ, ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣು ಹೇರೂರ್, ಕಟ್ಟಡ ಕಾರ್ಮಿಕರಾದ ಚಂದ್ರಕಾಂತ್ ಪಗಲಾಪುರ್, ಶ್ರೀಶೈಲ್ ಕೆಂಚಗುಂಡಿ, ಶೇಖ್ ಇನಾಯತ್, ಶರಣಪ್ಪ ಚಿತ್ತಾಪುರ, ಭೀಮರಾಯ ಕಡಬುರ್, ಮಹಾಂತೇಶ್ ನಾಟೇಕರ್, ಸಂತೋಷ್ ರಾಠೋಡ್, ಗುರುನಾಥ ದೊಡ್ಡಮನಿ, ವಿರೇಶ್ ಹಾಗೂ ಮಹೇಬೂಬ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News