Kalaburagi | ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರಿಗೆ ಒಂದು ವರ್ಷದ ಅಧಿಕಾರಾವಧಿ ವಿಸ್ತರಣೆ
ಕಲಬುರಗಿ: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿಯಾಗಿರುವ ಪ್ರೊ. ಬಟ್ಟು ಸತ್ಯನಾರಾಯಣ ಅವರ ಅಧಿಕಾರಾವಧಿಯನ್ನು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಒಂದು ವರ್ಷ ಅಥವಾ ಹೊಸ ಕುಲಪತಿ ನೇಮಕವಾಗುವವರೆಗೆ ವಿಸ್ತರಿಸಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಶಿಕ್ಷಣ ಸಚಿವಾಲಯದಿಂದ ಅಧಿಕೃತ ಆದೇಶ ಬಂದಿದ್ದು, ಜುಲೈ 25ರಂದು ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಲಿದ್ದ ಪ್ರೊ. ಬಟ್ಟು ಸತ್ಯನಾರಾಯಣ ಅವರಿಗೆ ಸೇವಾ ಅವಧಿ ವಿಸ್ತರಣೆ ನೀಡಲಾಗಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ, ಹೊಸ ಶೈಕ್ಷಣಿಕ ವಿಭಾಗಗಳು ಮತ್ತು ಕೋರ್ಸ್‌ಗಳ ಆರಂಭ, ವಿದ್ಯಾರ್ಥಿ ವಸತಿ ನಿಲಯಗಳ ನಿರ್ಮಾಣ, ಆಧುನಿಕ ಪ್ರಯೋಗಾಲಯಗಳ ಸ್ಥಾಪನೆ, ಸುಸ್ಥಿರ ಕ್ಯಾಂಪಸ್ ಅಭಿವೃದ್ಧಿ ಹಾಗೂ ತರಬೇತಿ ಮತ್ತು ಉದ್ಯೋಗ ಕೇಂದ್ರಗಳ ಬಲವರ್ಧನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜಾರಿಗೊಂಡಿವೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಅವರ ಅಧಿಕಾರಾವಧಿಯನ್ನು ವಿಸ್ತರಿಸಿದೆ ಎಂದು ಕುಲಸಚಿವರು ಹೇಳಿದ್ದಾರೆ.