×
Ad

ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಪ್ರಥಮಾಧ್ಯತೆಯಾಗಲಿ : ಸಿಎಂ ಡಿ.ಕೆ.ಶಿವಕುಮಾರ್‌

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ

Update: 2026-07-07 22:08 IST

ಕಲಬುರಗಿ: ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಲಬುರಗಿ ವಿಭಾಗದ ಪ್ರಗತಿ ಪರಿಶೀಲನೆ ಹಾಗೂ ಬರ ಪರಿಸ್ಥಿತಿ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.

ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ :

ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ. ಬೀದರ್‌ಗೆ 12 ಕೋಟಿ ರೂ., ಕಲಬುರಗಿಗೆ 36 ಕೋಟಿ ರೂ., ಕೊಪ್ಪಳಕ್ಕೆ 10 ಕೋಟಿ ರೂ., ರಾಯಚೂರಿಗೆ 3 ಕೋಟಿ ರೂ., ಯಾದಗಿರಿಗೆ 9 ಕೋಟಿ ರೂ. ಹಾಗೂ ವಿಜಯನಗರ ಜಿಲ್ಲೆಗೆ 7 ಕೋಟಿ ರೂ. ಲಭ್ಯವಿದ್ದು, ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬೀಜ, ಗೊಬ್ಬರ ದಾಸ್ತಾನು ಮಾಡಿಟ್ಟುಕೊಳ್ಳಿ :

ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಕಲಬುರಗಿ ವಿಭಾಗದಲ್ಲಿ ಈವರೆಗೆ 14 ಲಕ್ಷ ಹೆಕ್ಟೇರ್ ಬಿತ್ತನೆಯಾಗಬೇಕಿದ್ದರೂ ಕೇವಲ 11.16 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ನಡೆದಿದೆ. 51 ತಾಲೂಕುಗಳ ಪೈಕಿ 36 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮುಂದಿನ ದಿನಗಳಲ್ಲಿ ಮಳೆ ಬಂದರೆ ರೈತರಿಗೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಈಗಿನಿಂದಲೇ ಸಾಕಷ್ಟು ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ವಿದ್ಯುತ್ ಸಮಸ್ಯೆಗೆ ತಕ್ಷಣ ಸ್ಪಂದಿಸಿ :

ಸಭೆಯಲ್ಲಿ ಶಾಸಕರು ಗ್ರಾಮೀಣ ಭಾಗದಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಹಾಗೂ ಬದಲಾವಣೆಗೆ ವಿಳಂಬವಾಗುತ್ತಿರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಟಿ.ಸಿ. ಕೆಟ್ಟ ಕೂಡಲೇ ದುರಸ್ತಿ ಅಥವಾ ಬದಲಾವಣೆ ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸೂಪರ್ ಎಲ್‌ನಿನೋ ಎಚ್ಚರಿಕೆ :

ಸೂಪರ್ ಎಲ್‌ನಿನೋ ಪರಿಣಾಮದಿಂದ ಉಷ್ಣಾಂಶ ಹೆಚ್ಚಾಗಿ ಡೆಂಗ್ಯೂ, ಚಿಕನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಿಎಂ ಸೂಚಿಸಿದರು.

ನದಿ ಜೋಡಣೆಗೆ ಕೇಂದ್ರಕ್ಕೆ ಪ್ರಸ್ತಾವನೆ :

ಕಾವೇರಿ–ಕೃಷ್ಣಾ–ಗೋದಾವರಿ ನದಿ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 1 ಲಕ್ಷ ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಯೋಜನೆ ಜಾರಿಯಾದರೆ ರಾಜ್ಯಕ್ಕೆ 33 ಟಿಎಂಸಿ ನೀರು ದೊರೆಯಲಿದ್ದು, ಕಲ್ಯಾಣ ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಹೇಳಿದರು.

ಕೆಕೆಆರ್‌ಡಿಬಿ ಕಾಮಗಾರಿಗಳಿಗೆ ವೇಗ :

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಲ್ಲಿ 13 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ಕಂದಾಯ ಸೇವೆಗಳ ವಿಶೇಷ ಅಭಿಯಾನ :

ಇ-ಪೌತಿ, ದರಖಾಸ್ತು, ಪೋಡಿ, ಹಕ್ಕುಪತ್ರ ವಿತರಣೆ ಹಾಗೂ ಹೊಸ ಕಂದಾಯ ಗ್ರಾಮ ಘೋಷಣೆ ಸೇರಿದಂತೆ ಕಂದಾಯ ಇಲಾಖೆಯ ಸೇವೆಗಳನ್ನು ಮುಂದಿನ ಮೂರು ತಿಂಗಳಲ್ಲಿ ವಿಶೇಷ ಅಭಿಯಾನದ ಮೂಲಕ ಜನರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹಾಗೂ ವಿವಿಧ ಜಿಲ್ಲೆಗಳ ಶಾಸಕರು, ಸಂಸದರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿ ತಮ್ಮ ಕ್ಷೇತ್ರಗಳ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದರು.

ಸಭೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ, ಕಂದಾಯ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಜಿ.ರಮೇಶ್ವರ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ ಗಿರಿನಾಥ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ದಿ ಆಯುಕ್ತರು ಉಮಾ ಮಹಾದೇವನ್, ನೀರಾವರಿ ಇಲಾಖೆಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ, ಪ್ರಜಾ ಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಸೇರಿದಂತೆ ಪ್ರದೇಶದ ಏಳು ಜಿಲ್ಲೆಗಳ ಸಂಸದರು, ಶಾಸಕರು, ಬರ ಸಂಬಂಧಿತ ವಿವಿಧ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಕಲಬುರಗಿ ವಿಭಾಗದ ಡಿ.ಸಿ., ಜಿಲ್ಲಾ ಪಂಚಾಯತ್ ಸಿ.ಇ.ಓಗಳು, ಕೃಷಿ ತೋಟಗಾರಿಕೆ, ಪಶುಸಂಗೋಪನೆ, ನೀರಾವರಿ ಸೇರಿದಂತೆ ವಿವಿಧ ಇಲಾಖೆಯ ವಿಬಾಗ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸ್ಸಿಮ್ ಸ್ವಾಗತಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News