ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಹಾರ ಆರೋಪ: ಸಮಗ್ರ ತನಿಖೆಗೆ ಜೆಡಿಎಸ್ ಆಗ್ರಹ
ಅಫಜಲಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಕಲಬುರಗಿಯ ಶಾಂತಾ ಆಸ್ಪತ್ರೆಯ ಹೊರರೋಗಿ ವಿಭಾಗ (ಒಪಿಡಿ) ಮತ್ತು ಒಳರೋಗಿಗಳ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ತಾಳೆ ಹಾಕುವ ಮೂಲಕ ತನಿಖೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ಶಿವಕುಮಾರ ನಾಟಿಕಾರ ಆಗ್ರಹಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲ ಎಂಬ ಕಾರಣ ನೀಡಿ ಬಡ ರೋಗಿಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾದ ರೋಗಿಗಳ ವಿವರ, ಆಯುಷ್ಮಾನ್ ಭಾರತ ಯೋಜನೆಯಡಿ ನಡೆದ ಚಿಕಿತ್ಸೆಗಳ ದಾಖಲೆ ಹಾಗೂ ಎರಡೂ ಆಸ್ಪತ್ರೆಗಳ ಚಿಕಿತ್ಸಾ ವಿವರಗಳನ್ನು ಪರಿಶೀಲಿಸಿದರೆ ಆರೋಗ್ಯ ಸೇವೆ ಮತ್ತು ಸರ್ಕಾರಿ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪಗಳ ಸತ್ಯಾಸತ್ಯತೆ ಬಹಿರಂಗವಾಗಲಿದೆ ಎಂದರು.
ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಯ ನಡುವೆ ಒಳಒಪ್ಪಂದವಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವ ವೈದ್ಯರಿಗೆ ಕರ್ತವ್ಯದಲ್ಲಿ ವಿನಾಯಿತಿ ನೀಡಲಾಗುತ್ತಿದೆ ಎಂಬ ಆರೋಪವೂ ಇದೆ. ಈ ಕುರಿತು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಆರ್‌ಒ ಪ್ಲಾಂಟ್ ಅಳವಡಿಸಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಸಂಸ್ಥೆಗೆ ಪಥ್ಯಾಹಾರ ಪೂರೈಕೆ ಟೆಂಡರ್ ನೀಡಲಾಗಿದ್ದು, ₹77 ಲಕ್ಷಕ್ಕೂ ಅಧಿಕ ಮೊತ್ತದ ಅನುದಾನದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ ಎಂದು ಹೇಳಿದರು.
ಆಸ್ಪತ್ರೆಯ ತಜ್ಞ ವೈದ್ಯರ ಸಮಯ ಪಾಲನೆ, ರಾತ್ರಿ ಕರ್ತವ್ಯದಲ್ಲಿರುವ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಹಾಜರಾತಿ, ಐಸಿಯು ಸೌಲಭ್ಯ ಹಾಗೂ ಕರ್ನಾಟಕ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ (CAMS) ಹಾಜರಾತಿಯನ್ನು ಪರಿಶೀಲಿಸಬೇಕು ಎಂದು ನಾಟಿಕಾರ ಆಗ್ರಹಿಸಿದರು.
ಔಷಧಿ ಖರೀದಿಯಲ್ಲೂ ಕಮಿಷನ್ ಆರೋಪ :
ಆಸ್ಪತ್ರೆಯ ಔಷಧಿ ಖರೀದಿಯಲ್ಲಿಯೂ ಅಕ್ರಮದ ಆರೋಪಗಳಿವೆ. ಕಲಬುರಗಿಯಲ್ಲಿ ಕಡಿಮೆ ದರಕ್ಕೆ ದೊರೆಯುವ ಔಷಧಿಗಳನ್ನು ತುಮಕೂರು, ರಾಮನಗರ ಹಾಗೂ ಬೆಂಗಳೂರು ಭಾಗಗಳಿಂದ ಖರೀದಿಸುವ ಅಗತ್ಯವೇನಿತ್ತು ಎಂಬುದನ್ನು ಪರಿಶೀಲಿಸಬೇಕು. ಈ ಖರೀದಿ ಪ್ರಕ್ರಿಯೆಯಲ್ಲಿ ಕಮಿಷನ್ ವ್ಯವಹಾರ ನಡೆದಿದೆಯೇ ಎಂಬುದನ್ನು ತನಿಖಾ ಅಧಿಕಾರಿಗಳು ಪತ್ತೆಹಚ್ಚಬೇಕು ಎಂದು ನಾಟಿಕಾರ ಹೇಳಿದರು.
ಕಳೆದ ಎರಡು ತಿಂಗಳಿಂದ ಪಥ್ಯಾಹಾರಕ್ಕೆ ಸಂಬಂಧಿಸಿದ ಅವ್ಯವಹಾರದ ಆರೋಪಗಳು ಕೇಳಿಬರುತ್ತಿದ್ದರೂ ಶಾಸಕ ಎಂ.ವೈ. ಪಾಟೀಲ್ ಅವರು ಈ ಕುರಿತು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಿಂಗೆ, ಅಮೂಲ್ ಮೋರೆ, ರಾಜು ಉಕ್ಕಲಿ, ಶರಣಗೌಡ ಪಾಟೀಲ, ಮರೆಪ್ಪ ಜಮಾದಾರ, ಭಾಗಣ್ಣ ಕುಂಬಾರ, ಪ್ರಕಾಶ ಖೈರಾಟ್, ಅಮರಸಿಂಗ ರಜಪೂತ, ಬಾಬುರಾವ್ ಕೋಬಾಳ, ಸಿಂಧೂರ ರಾಠೋಡ, ಶ್ರೀಶೈಲ್ ಮಾಲಿಪಾಟೀಲ, ಸಿದ್ದು ನ್ಯಾವನೂರ, ಸಿದ್ದು ಪಾಯದ, ಸುರೇಶ ಮಾತಾರಿ, ಶರಣು ಬಳೂರ್ಗಿ, ಗುರು ಘಾಣೂರ ಆನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.