ಕಾಳಗಿಯಲ್ಲಿ ನೂತನ ನ್ಯಾಯಾಲಯ ಉದ್ಘಾಟನೆ
ಸಕಾಲದಲ್ಲಿ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಪ್ರಮುಖ ಉದ್ದೇಶ: ನ್ಯಾ. ಶಿವಶಂಕರ ಅಮರಣ್ಣನವರ್
ಕಾಳಗಿ: ಜನರ ಹಕ್ಕುಗಳ ರಕ್ಷಣೆ ಹಾಗೂ ಸಕಾಲದಲ್ಲಿ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಪ್ರಮುಖ ಉದ್ದೇಶವಾಗಿದೆ ಎಂದು ಕಲಬುರಗಿ ಜಿಲ್ಲೆಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ ಅಮರಣ್ಣನವರ್ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಸ್ಥಾಪಿಸಲಾದ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಳಗಿಯಲ್ಲಿ ನೂತನ ನ್ಯಾಯಾಲಯ ಆರಂಭವಾಗಿರುವುದರಿಂದ ಕಾಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ನ್ಯಾಯಾಂಗ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿವೆ. ಇದರಿಂದ ನ್ಯಾಯಕ್ಕಾಗಿ ದೂರದ ಪ್ರದೇಶಗಳಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗಲಿದ್ದು, ಸಾರ್ವಜನಿಕರಿಗೆ ತ್ವರಿತವಾಗಿ ಹಾಗೂ ಸುಲಭವಾಗಿ ನ್ಯಾಯ ದೊರಕಿಸುವಲ್ಲಿ ನೂತನ ನ್ಯಾಯಾಲಯ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಈ ಭಾಗದ ಜನರಿಗೆ ನ್ಯಾಯಾಲಯದ ಅಗತ್ಯವಿತ್ತು. ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಸುಸಜ್ಜಿತ ನ್ಯಾಯಾಲಯ ಸ್ಥಾಪಿಸಲು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರ ಶ್ರಮ ಮಹತ್ವದ್ದಾಗಿದೆ. ಇದರಿಂದ ಸಾರ್ವಜನಿಕರು ಪ್ರಕರಣಗಳ ವಿಚಾರಣೆಗಾಗಿ ದೂರದ ಊರುಗಳಿಗೆ ತೆರಳದೆ ಸ್ಥಳೀಯವಾಗಿಯೇ ನ್ಯಾಯ ಪಡೆಯಲು ಸಾಧ್ಯವಾಗಲಿದೆ ಎಂದರು.
ಕಾಳಗಿಯಲ್ಲಿ ಶಾಶ್ವತ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಶಿವಶರಣಪ್ಪ ಕಮಲಾಪೂರ ಅವರು ಮೂರು ಎಕರೆ ಜಮೀನು ದೇಣಿಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಹೊಸ ತಾಲೂಕು ಕೇಂದ್ರಗಳಲ್ಲಿ ಸರ್ಕಾರ 105 ನ್ಯಾಯಾಲಯ ಕಟ್ಟಡಗಳನ್ನು ಸ್ಥಾಪಿಸಲು ಮುಂದಾಗಿದೆ. ಸ್ಥಳೀಯ ನಾಯಕರು ಹಾಗೂ ಶಾಸಕರು ಮುತುವರ್ಜಿ ವಹಿಸಿ ಕಾಳಗಿಯಲ್ಲಿ ಆದಷ್ಟು ಬೇಗ ಶಾಶ್ವತ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ನ್ಯಾಯಾಲಯ ಸ್ಥಾಪನೆಗೆ ಶ್ರಮಿಸಿದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ನಿವೃತ್ತ ನ್ಯಾಯಾಧೀಶ ಡಾ. ಚೆನ್ನಮಲ್ಲಪ್ಪ ಬೆನಕನಳ್ಳಿ ಹಾಗೂ ನ್ಯಾಯಾಲಯ ಕಟ್ಟಡಕ್ಕಾಗಿ ಭೂಮಿ ದೇಣಿಗೆ ನೀಡಿದ ಶಿವಶರಣಪ್ಪ ಕಮಲಾಪೂರ ಅವರನ್ನು ಸತ್ಕರಿಸಲಾಯಿತು.
ಇದಕ್ಕೂ ಮೊದಲು ನ್ಯಾಯಾಲಯ ಕಟ್ಟಡ ಉದ್ಘಾಟನೆಗೆ ಆಗಮಿಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರನ್ನು ಪೊಲೀಸ್ ಇಲಾಖೆಯಿಂದ ಸರ್ಕಾರಿ ಗೌರವದೊಂದಿಗೆ ಸ್ವಾಗತಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ ಹಾಗೂ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಮಾತನಾಡಿದರು. ಕಾಳಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಸ್. ನಾಮದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ್ ನವಲಿ ಸ್ವಾಗತಿಸಿದರು.
ಶಾಸಕ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ, ಶಿವಶರಣಪ್ಪ ಕಮಲಾಪೂರ, ನಿವೃತ್ತ ನ್ಯಾಯಾಧೀಶ ಡಾ. ಚೆನ್ನಮಲ್ಲಪ್ಪ ಬೆನಕನಳ್ಳಿ, ವಕೀಲರಾದ ಮೈಮೂದ ಕಂಚಗಾರ, ಮಹಾಂತೇಶ ಮಂಡೆವಾಲ, ರೇವಣಸಿದ್ದಪ್ಪ ಮಾಸ್ಟರ್, ಬಸವರಾಜ ಶಿವಗೋಳ, ರೇವಣಸಿದ್ದಪ್ಪ ತೇಲಿ, ಶಶಿಕಾಂತ ಅಡಕಿ, ರಾಜಶೇಖರ ರಟಕಲ್, ಅರುಣಕುಮಾರ ಕೊರವಿ, ಜೀವನ ಮಂಗಲಗಿ, ಎನ್.ಎಸ್ ಪಾಟೀಲ, ಮಂಜುನಾಥ್ ಪಾಟೀಲ, ನಾಗಭೂಷಣ ಹುಲಗುಂದಿ, ನಾಗಣ್ಣ ಚೊಂಚಿ, ಸಂಪತ ತೆಗಲಪ್ಪಿ, ಜಿಎಲ್ ನಾರಾಯಣಸ್ವಾಮಿ, ಶ್ರೀನಿವಾಸ ನವಲೆ ಸೇರಿದಂತೆ ಅನೇಕ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.