ಕಲಬುರಗಿ: ಆಳಂದ ತಾಲೂಕಿನ 12 ಕೆರೆಗಳಿಗೆ ಬೋರಿ ನದಿಯಿಂದ ನೀರು ತುಂಬಿಸುವ 56 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಅಖಿಲ ಕರ್ನಾಟಕ ದಲಿತ ಸೇನೆ ಸ್ವಾಗತಿಸಿದೆ. ಯೋಜನೆಗೆ ಅನುಮೋದನೆ ದೊರಕುವಲ್ಲಿ ಸತತ ಪ್ರಯತ್ನ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದೆ.

ಈ ಕುರಿತು ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ ಹಾಗೂ ಜಿಲ್ಲಾಧ್ಯಕ್ಷ ಸಂಜೀವಕುಮಾರ ಕಾಂಬಳೆ ಪತ್ರಿಕಾ ಪ್ರಕಟಣೆ ನೀಡಿದ್ದು, ಬೋರಿ ನದಿಯಿಂದ 28.94 ಎಂಸಿಎಫ್‌ಟಿ ನೀರನ್ನು ಆಳಂದ ತಾಲೂಕಿನ 12 ಕೆರೆಗಳಿಗೆ ಹರಿಸಲು ಪಂಪಿಂಗ್ ವ್ಯವಸ್ಥೆ, ಪಂಪ್‌ಹೌಸ್, ವಿದ್ಯುತ್ ಉಪಕೇಂದ್ರ, ಪೈಪ್‌ಲೈನ್ ಹಾಗೂ ವಿತರಣಾ ಜಾಲ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆ ಜಾರಿಯಾದರೆ ಆಳಂದ ತಾಲೂಕಿನ ಹಲವು ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ದೊರೆಯುವುದರ ಜತೆಗೆ ಅಂತರ್ಜಲ ಮಟ್ಟ ಸುಧಾರಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಆಳಂದ ತಾಲೂಕಿನ ಅಮರ್ಜಾ ಆಣೆಕಟ್ಟಿಗೆ ಬೋರಿ ನದಿಯಿಂದ ನೀರು ತುಂಬಿಸುವ ಯೋಜನೆಯ ಮುಖ್ಯ ಪೈಪ್‌ಲೈನ್ ಕಡಿತಗೊಂಡಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ಹಾಗೂ ಕಲಬುರಗಿ, ಬೀದರ್, ಯಾದಗಿರಿ ಸಹಕಾರಿ ಹಾಲು ಮಾರಾಟ ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಗೆ ಅಖಿಲ ಕರ್ನಾಟಕ ದಲಿತ ಸೇನೆ ಬೆಂಬಲ ವ್ಯಕ್ತಪಡಿಸಿದೆ.

ಅಫಜಲಪುರ ತಾಲೂಕಿನ ಅರ್ಜುಣಗಿ–ಬಡದಾಳ ಗ್ರಾಮಗಳ ನಡುವಿನ ಸುಮಾರು 500 ಮೀಟರ್ ಉದ್ದದ ಮುಖ್ಯ ಪೈಪ್‌ಲೈನ್‌ನ್ನು ಚೆನ್ನೈ–ಸೂರತ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಕಡಿತಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕವೂ ಪೈಪ್‌ಲೈನ್ ಮರುಜೋಡಣೆಗೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಕ್ರಮ ಖಂಡನೀಯ ಎಂದು ದತ್ತಾತ್ರೇಯ ಕುಡಕಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor