ಕಲಬುರಗಿ: ಭಾರತೀಯ ತತ್ವಶಾಸ್ತ್ರವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ತತ್ವಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆ. 21ನೇ ಶತಮಾನದ ಮಹಾಮನೆಯಾದ ಭಾರತದಲ್ಲಿ ನೈತಿಕ ತತ್ವಶಾಸ್ತ್ರದ ಮೂಲಕ ಐಕ್ಯತೆ, ಪರಸ್ಪರ ಪ್ರೀತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಅಭಿಪ್ರಾಯಪಟ್ಟರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಶ್ರಮಿಕ ಹಾಗೂ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ ಬೆಳೆದ ರಾಧಾಕೃಷ್ಣನ್ ಅವರು ಭಾರತೀಯ ತತ್ವಶಾಸ್ತ್ರದ ಬೆಳಕಾಗಿದ್ದರು. ಹಿಂದೂ ಧರ್ಮ ಹಾಗೂ ಭಾರತೀಯ ತತ್ವಶಾಸ್ತ್ರದ ಸಾರವನ್ನು ಪಾಶ್ಚಾತ್ಯ ಮತ್ತು ಪೌರಸ್ತ್ಯ ದೇಶಗಳಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಿರಂತರ ಅಧ್ಯಯನ ಹಾಗೂ ಬೋಧನೆಯ ಮೂಲಕ ಜಾಗತಿಕ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿದ ಅವರು, ವಿಶ್ವದ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗುರುವಿನ ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ ಎಂದರು.

ಮೊಬೈಲ್, ಇಂಟರ್‌ನೆಟ್ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ, ವೈಜ್ಞಾನಿಕ ಜ್ಞಾನ ಹಾಗೂ ಜೀವನ ಮೌಲ್ಯಗಳನ್ನು ಶಿಕ್ಷಕರು ನೀಡಬೇಕಾಗಿದೆ. ಅತ್ಯುತ್ತಮ ಶಿಕ್ಷಕರಲ್ಲಿರುವ ವಿಷಯ ಪ್ರಭುತ್ವ, ವಿದ್ಯಾರ್ಥಿಗಳ ಬಗೆಗಿನ ಸಹಾನುಭೂತಿ ಹಾಗೂ ಮಾನವೀಯ ದೃಷ್ಟಿಕೋನಗಳು ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಹಾಗೂ ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರು ಉಪಸ್ಥಿತರಿದ್ದರು. ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ರಮೇಶ್ ರಾಠೋಡ್ ಸ್ವಾಗತಿಸಿದರು.

ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಪರೀಕ್ಷಾ ಅಧೀಕ್ಷಕ ಬಿ.ಎಂ. ರುದ್ರವಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ನಗರದ ಗಣ್ಯರು ಭಾಗವಹಿಸಿದ್ದರು.

ಮನುಷ್ಯರ ನಡುವೆ ಪ್ರೀತಿ, ಸಹೋದರತ್ವ, ಮಾನವೀಯತೆ ಬೆಳೆಸಬೇಕು: 

ಕಲುಷಿತ ಸಾಮಾಜಿಕ ವ್ಯವಸ್ಥೆಯ ಮೌಢ್ಯಗಳಿಂದ ಹೊರಬಂದು ಮನುಷ್ಯರ ನಡುವೆ ಪರಸ್ಪರ ಪ್ರೀತಿ, ಸಹೋದರತ್ವ ಹಾಗೂ ಮಾನವೀಯತೆ ಬೆಳೆಸುವ ಅಗತ್ಯವಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ವೇದ, ಉಪನಿಷತ್ತು ಹಾಗೂ ಧರ್ಮಶಾಸ್ತ್ರಗಳ ಪಾಂಡಿತ್ಯ ಹೊಂದಿದ್ದಷ್ಟೇ ಅಲ್ಲದೆ, ಅತ್ಯುತ್ತಮ ಶಿಕ್ಷಕರಾಗಿ, ಉಪರಾಷ್ಟ್ರಪತಿಯಾಗಿ ಹಾಗೂ ರಾಷ್ಟ್ರಪತಿಯಾಗಿ ದೇಶದ ಐಕ್ಯತೆ ಮತ್ತು ಮೌಲ್ಯಗಳ ಬಲವರ್ಧನೆಗೆ ಶ್ರಮಿಸಿದ ಮಹಾನ್ ಚಿಂತಕರಾಗಿದ್ದರು ಎಂದು ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor