2014ರಿಂದಲೇ ಪ್ರಜಾಪ್ರಭುತ್ವ ವಿರೋಧಿ ಘಟನೆ ನಡೆಯುತ್ತಿದೆ: ಕೇಂದ್ರದ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ
ಸಚಿವ ಎಂ.ಬಿ. ಪಾಟೀಲ್
ಕಲಬುರಗಿ: ದಿಲ್ಲಿಯಲ್ಲಿ ಪ್ರತಿಭಟನೆ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮೇಲೆ ನಡೆದ ಘಟನೆ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಇಂತಹ ಬೆಳವಣಿಗೆಗಳು 2014ರಿಂದಲೇ ನಡೆಯುತ್ತಿವೆ ಎಂದು ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಒಳ್ಳೆಯ ದಿನಗಳು ಬರುತ್ತವೆ, ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಉದ್ಯೋಗ ಸೃಷ್ಟಿಯಾಗಿಲ್ಲ. ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಡಾಲರ್ ಮೌಲ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಸಾಕಷ್ಟು ಮಾತನಾಡುತ್ತಿದ್ದರು. ಡಾಲರ್ ಒಂದು ದೇಶದ ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳುತ್ತಿದ್ದರು. ಈಗಿನ ಪರಿಸ್ಥಿತಿ ನೋಡಿದರೆ ದೇಶದ ಆರ್ಥಿಕ ಸ್ಥಿತಿ ಹಾಗೂ ಪ್ರಧಾನಿಯವರ ನಾಯಕತ್ವ ಎಷ್ಟರ ಮಟ್ಟಿಗೆ ದುರ್ಬಲವಾಗಿದೆ ಎಂಬುದು ಗೊತ್ತಾಗುತ್ತದೆ" ಎಂದು ಹೇಳಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿದ ಅವರು, "ಈ ಪ್ರಕರಣದಿಂದ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಆದರೂ ಪ್ರಧಾನಿ ಯುವಕರನ್ನು ಭೇಟಿ ಮಾಡಿ ಅವರ ನೋವನ್ನು ಆಲಿಸುವ ಪ್ರಯತ್ನ ಮಾಡಲಿಲ್ಲ. ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಇತರರು ಹೇಳುವುದಕ್ಕಿಂತ ಸ್ವತಃ ಯುವಕರೊಂದಿಗೆ ಮಾತನಾಡಬೇಕಿತ್ತು" ಎಂದು ಅಭಿಪ್ರಾಯಪಟ್ಟರು.
"ನಮ್ಮ ರಾಜ್ಯದಲ್ಲಿ ಕೆಇಎ ಪರೀಕ್ಷೆಗಳನ್ನು ಹೇಗೆ ಸಮರ್ಪಕವಾಗಿ ನಡೆಸಲಾಗುತ್ತಿದೆ ಎಂಬುದನ್ನು ನೋಡಬಹುದು. ಸಂಬಂಧಪಟ್ಟ ಪ್ರಕರಣದಲ್ಲಿ ಪ್ರತಿಭಟನೆ ಆರಂಭವಾದ ಕೂಡಲೇ ಹೊಣೆಗಾರರ ರಾಜೀನಾಮೆ ಪಡೆಯಬೇಕಿತ್ತು. ಹಾಗೆ ಮಾಡಿದ್ದರೆ ಈ ಮಟ್ಟದ ಪ್ರತಿಭಟನೆ ನಡೆಯುತ್ತಿರಲಿಲ್ಲ" ಎಂದರು.
'ಒನ್ ನೇಶನ್, ಒನ್ ಎಲೆಕ್ಷನ್' ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಒಂದು ದೇಶ, ಒಂದು ಚುನಾವಣೆ ಎಂಬ ಹೆಸರಿನಲ್ಲಿ ಸರ್ವಾಧಿಕಾರದತ್ತ ಸಾಗುವ ಪ್ರಯತ್ನ ನಡೆಯುತ್ತಿದೆ" ಎಂದು ಆರೋಪಿಸಿದರು.
ರಾಜಕೀಯ ಪಕ್ಷಾಂತರದ ಕುರಿತು ಮಾತನಾಡಿದ ಅವರು, "ಬೇರೆ ಪಕ್ಷದಲ್ಲಿದ್ದಾಗ ಭ್ರಷ್ಟರು ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದರು. ಆದರೆ ಅದೇ ನಾಯಕರು ಬಿಜೆಪಿ ಸೇರಿದ ನಂತರ ಎಲ್ಲರೂ ಸ್ವಚ್ಛರಾಗಿದ್ದಾರೆಯೇ? ಅವರ ವಿರುದ್ಧದ ಆರೋಪಗಳು ಏನಾದವು?" ಎಂದು ಪ್ರಶ್ನಿಸಿದರು.
"ನಮ್ಮ ಸರ್ಕಾರದ ಅವಧಿಯಲ್ಲಿ ಯಾರ ವಿರುದ್ಧ ಆರೋಪಗಳು ಕೇಳಿಬಂದರೂ, ಕೇಂದ್ರ ಮಟ್ಟದಲ್ಲಿಯೂ ರಾಜೀನಾಮೆ ಪಡೆಯುವ ಸಂಪ್ರದಾಯ ಇತ್ತು. ಆದರೆ ಈಗ ಅಂತಹ ರಾಜಕೀಯ ಹೊಣೆಗಾರಿಕೆ ಕಾಣಿಸುತ್ತಿಲ್ಲ" ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.