Kalaburagi | ಸರ್ಕಾರಿ ಶಿಕ್ಷಕರು ಸಮಾನ ಹುದ್ದೆಗೆ ಮರು ಅರ್ಜಿ ಸಲ್ಲಿಸುವುದನ್ನು ನಿಷೇಧಿಸುವಂತೆ ಆಗ್ರಹ

Update: 2026-07-22 20:44 IST

ಕಲಬುರಗಿ: ಸರ್ಕಾರಿ ಸೇವೆಯಲ್ಲಿರುವ ಶಿಕ್ಷಕರು ಅದೇ ಅಥವಾ ಸಮಾನ ಶಿಕ್ಷಕರ ಹುದ್ದೆಗಳಿಗೆ ಮರು ಅರ್ಜಿ ಸಲ್ಲಿಸುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ, ರಿಪಬ್ಲಿಕನ್ ಯೂಥ್ ಫೆಡರೇಶನ್, ಸಮರ್ಥ ಸ್ಟಡಿ ಸರ್ಕಲ್ ಸೇರಿದಂತೆ ವಿವಿಧ ವಿವಿಧ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಖಂಡರು, ಡಿ.ಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮುಂಬರುವ ದಿನಗಳಲ್ಲಿ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಬೀಳಲಿದ್ದು, ಕಳೆದ ನಾಲ್ಕು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವ ಕಾರಣ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅವಕಾಶದಿಂದ ವಂಚಿತರಾಗಿದ್ದಾರೆ. ಮತ್ತೊಂದೆಡೆ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಲಕ್ಷಾಂತರ ಪದವೀಧರರು ನಿರುದ್ಯೋಗಿಗಳಾಗಿದ್ದು, ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಸಿವಿಲ್ ಸರ್ವಿಸ್ (ನೇಮಕಾತಿ) ನಿಯಮಗಳ ಪ್ರಕಾರ ಸರ್ಕಾರಿ ಸೇವೆಯಲ್ಲಿರುವ ಉದ್ಯೋಗಿಗಳು ಮತ್ತೊಂದು ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ನಿಯಮದ ಅನ್ವಯ ಈಗಾಗಲೇ ಸರ್ಕಾರಿ ಶಿಕ್ಷಕರಾಗಿರುವವರು ಮತ್ತೊಮ್ಮೆ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಿ ಹೊಸ ಹುದ್ದೆಗೆ ಆಯ್ಕೆಯಾಗುತ್ತಿರುವುದರಿಂದ ಹಳೆಯ ಹುದ್ದೆಗಳು ಖಾಲಿಯಾಗುತ್ತಿವೆ. ಇದರಿಂದ ಹೊಸ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದ್ದು, ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಕೆಲ ಶಿಕ್ಷಕರು ತಮ್ಮ ಸೇವಾ ವಿವರಗಳನ್ನು ಅರ್ಜಿಯಲ್ಲಿ ನಮೂದಿಸದೆ ಸಾಮಾನ್ಯ ಅಭ್ಯರ್ಥಿಗಳಂತೆ ಅರ್ಜಿ ಸಲ್ಲಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬಳಿಕ ಮರು ಆಯ್ಕೆಯಾದ ನಂತರ ಹಳೆಯ ಹುದ್ದೆಗೆ ರಾಜೀನಾಮೆ ನೀಡಿ ಹೊಸ ಸ್ಥಳಕ್ಕೆ ಸೇರುತ್ತಿರುವ ಪರಿಣಾಮ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ದೀರ್ಘಕಾಲ ಖಾಲಿ ಉಳಿದು ಶಿಕ್ಷಣದ ಗುಣಮಟ್ಟಕ್ಕೂ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಆಧಾರ್, ಎಚ್‌ಆರ್‌ಎಂಎಸ್ ಹಾಗೂ ಎಸ್‌ಎಟಿಎಸ್ ತಂತ್ರಾಂಶಗಳು ಪರಸ್ಪರ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ, ಆನ್‌ಲೈನ್ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳನ್ನು ತಾಂತ್ರಿಕವಾಗಿ ಗುರುತಿಸಿ ಮರು ಅರ್ಜಿಗಳನ್ನು ನಿಯಂತ್ರಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ರಿಪಬ್ಲಿಕನ್ ಯೂತ್ ಫೆಡರೇಶನ್‌ನ ಹಣಮಂತ ಇಟಗಿ, ಕಲ್ಯಾಣ ನಾಡು ವಿಕಾಸ ವೇದಿಕೆ ಅಧ್ಯಕ್ಷ ಮುತ್ತಣ್ಣ ನಡಗೇರಿ, ಯುವ ಹೋರಾಟಗಾರ ಡಾ. ಅನಿಲ ಟೆಂಗಳಿ, ಸಮರ್ಥ ಸ್ಟಡಿ ಸೆಂಟರ್ ನಿರ್ದೇಶಕ ಸಂತೋಷ ಪೂಜಾರಿ, ಬದುಕು ಕರಿಯರ್ ಅಕಾಡೆಮಿ ಅಧ್ಯಕ್ಷ ಪಂಡಿತ್ ಮದುಗುಣಕಿ, ಸಿದ್ದು ಬೆಲಸೂರ, ಅಲ್ಲಮಪ್ರಭು ನಿಂಬರ್ಗಾ, ಶ್ರೀಧರ ನರೋಣಾ, ಬಾಬು ಬೀಳಗೆ, ಉಮೇಶ ಶೃಂಗೇರಿ, ಕೇದರನಾಥ, ಶಿವಾನಂದ ಸೇರಿದಂತೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News