Kalaburagi | ಶಹಾಬಾದ್ ಜಿಇ ಪವರ್ ಇಂಡಿಯಾ ಘಟಕ ಪುನಶ್ಚೇತನಕ್ಕೆ ಸರ್ಕಾರ ಮಧ್ಯಪ್ರವೇಶಿಸಲಿ: ಅಭಿವೃದ್ಧಿ ಸಮಿತಿ ಮನವಿ

Update: 2026-07-22 20:58 IST

ಕಲಬುರಗಿ: ಶಹಾಬಾದ್‌ನಲ್ಲಿರುವ ಜಿಇ ಪವರ್ ಇಂಡಿಯಾ ಲಿಮಿಟೆಡ್‌ (ಹಿಂದಿನ ಎಬಿಎಲ್, ಎಬಿಬಿ, ಅಲ್ಸ್ಟೊಮ್) ಭಾರೀ ಎಂಜಿನಿಯರಿಂಗ್ ಕೈಗಾರಿಕಾ ಘಟಕವನ್ನು ಪುನಶ್ಚೇತನಗೊಳಿಸಿ ಮತ್ತೆ ಉತ್ಪಾದನಾ ಚಟುವಟಿಕೆ ಆರಂಭಿಸಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಶಹಾಬಾದ್ ಅಭಿವೃದ್ಧಿ ಸಮಿತಿ ಒತ್ತಾಯಿಸಿದೆ.

ಈ ಕುರಿತು ಸಮಿತಿಯ ಕಾರ್ಯದರ್ಶಿ ರಮೇಶ್ ಭಟ್ ಹಾಗೂ ಗೌರವಾಧ್ಯಕ್ಷರು ಮತ್ತು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ನೇತೃತ್ವದ ನಿಯೋಗವು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಯಾದಗಿರಿ ಪ್ರವಾಸದ ಬಳಿಕ ಶಹಾಬಾದ್ ಮಾರ್ಗವಾಗಿ ಆಗಮಿಸಿದ ಸಚಿವ ಎಂ.ಬಿ. ಪಾಟೀಲ್ ಅವರಿಗಾಗಿ ಸಮಿತಿಯು ಜಿಇ ಪವರ್ ಇಂಡಿಯಾ ಘಟಕದಲ್ಲಿ ವಿಶೇಷ ಭೇಟಿ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಸಚಿವರಿಗೆ ಘಟಕದ ಪ್ರಸ್ತುತ ಸ್ಥಿತಿಯನ್ನು ವಿವರಿಸಿ, ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಕೈಗಾರಿಕಾ ಘಟಕವನ್ನು ಪುನಾರಂಭಿಸಲು ಸರ್ಕಾರದ ಮಧ್ಯಪ್ರವೇಶ ಅಗತ್ಯ ಎಂದು ಮನವಿ ಮಾಡಲಾಯಿತು. ಸಚಿವರು ಸ್ಥಳ ಪರಿಶೀಲನೆ ನಡೆಸಿ, ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.

1965ರಲ್ಲಿ ಸ್ಥಾಪನೆಯಾದ ಈ ಘಟಕವು ಎಬಿಎಲ್, ಎಬಿಬಿ, ಅಲ್ಸ್ಟೊಮ್ ಮೂಲಕ ಪ್ರಸ್ತುತ ಜಿಇ ಪವರ್ ಇಂಡಿಯಾ ಲಿಮಿಟೆಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ದೇಶದ ಪ್ರಮುಖ ಭಾರೀ ಎಂಜಿನಿಯರಿಂಗ್ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದ್ದ ಈ ಘಟಕ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸ್ಥಗಿತಗೊಂಡಿದ್ದು, ಸಾವಿರಾರು ನೇರ ಹಾಗೂ ಪರೋಕ್ಷ ಉದ್ಯೋಗಗಳು ನಷ್ಟವಾಗಿವೆ. ಇದರಿಂದ ಶಹಾಬಾದ್ ಮಾತ್ರವಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ಧಿಗೂ ಹಿನ್ನಡೆಯಾಗಿದೆ ಎಂದು ಸಮಿತಿ ತಿಳಿಸಿದೆ.

ಸುಮಾರು 300 ಎಕರೆಗೂ ಅಧಿಕ ಪ್ರದೇಶದಲ್ಲಿರುವ ಘಟಕದಲ್ಲಿ ಸುಸಜ್ಜಿತ ಉತ್ಪಾದನಾ ಮೂಲಸೌಕರ್ಯ, ವಸತಿ ಕಾಲೋನಿ ಸೇರಿದಂತೆ ಅಗತ್ಯ ಸೌಲಭ್ಯಗಳು ಈಗಾಗಲೇ ಲಭ್ಯವಿವೆ. ರಕ್ಷಣಾ ಉತ್ಪಾದನೆ, ಏರೋಸ್ಪೇಸ್, ಇಂಧನ ಉಪಕರಣಗಳು ಹಾಗೂ ಭಾರೀ ಎಂಜಿನಿಯರಿಂಗ್ ಕ್ಷೇತ್ರದ ಕೈಗಾರಿಕೆಗಳಿಗೆ ಈ ಘಟಕವನ್ನು ಬಳಸಿಕೊಳ್ಳಬಹುದಾಗಿದ್ದು, ಹೊಸ ಕೈಗಾರಿಕೆ ಸ್ಥಾಪನೆಗಿಂತ ಕಡಿಮೆ ವೆಚ್ಚದಲ್ಲಿ ಪುನಶ್ಚೇತನಗೊಳಿಸಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಜಿಇ ಪವರ್ ಇಂಡಿಯಾ ಆಡಳಿತ ಮಂಡಳಿಯೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿ ಘಟಕ ಪುನಾರಂಭಕ್ಕೆ ಅಗತ್ಯ ನೀತಿ ಬೆಂಬಲ ನೀಡಬೇಕು. ಕಂಪನಿಯು ಪುನಾರಂಭಕ್ಕೆ ಆಸಕ್ತಿ ತೋರದಿದ್ದರೆ, ಈ ಕೈಗಾರಿಕಾ ಆಸ್ತಿಯನ್ನು ಇತರೆ ಸೂಕ್ತ ಕೈಗಾರಿಕೆಗಳ ಬಳಕೆಗೆ ಒದಗಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಘಟಕ ಪುನಾರಂಭವಾದರೆ ಸಾವಿರಾರು ಉದ್ಯೋಗ ಸೃಷ್ಟಿಯಾಗುವುದರ ಜತೆಗೆ ಪೂರಕ ಕೈಗಾರಿಕೆಗಳು ಹಾಗೂ ಎಂಎಸ್‌ಎಂಇ ವಲಯಕ್ಕೂ ಉತ್ತೇಜನ ದೊರೆಯಲಿದೆ. ಅಲ್ಲದೆ, ರಾಜ್ಯ ಸರ್ಕಾರದ ‘ಬಿಲ್ಡ್ ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಗೂ ಇದು ಬಲ ನೀಡಲಿದೆ ಎಂದು ಸಮಿತಿ ತಿಳಿಸಿದೆ.

ಮನವಿ ಸ್ವೀಕರಿಸಿದ ಸಚಿವ ಎಂ.ಬಿ. ಪಾಟೀಲ್ ಅವರು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಮೊಹಮ್ಮದ್ ಫಜಲ್ ಪಟೇಲ್, ಕನಕಪ್ಪ ದಂಡಗುಲ್ಜಾರ್, ಮೃತ್ಯುಂಜಯ ಸ್ವಾಮಿ, ಹಸಂ ಖಾನ್ ಹಾಗೂ ಪೊಲೀಸ್ ಪಾಟೀಲ ಶರಣಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News