ವೈಜ್ಞಾನಿಕ ಚಿಂತನೆ ಮೂಲಕ ಕಾರ್ಯಸಿದ್ಧಿಗೆ ಪ್ರಯತ್ನಿಸಿ: ಬಸವರಾಜ ಪಾಟೀಲ್ ಸೇಡಂ
ಕಲಬುರಗಿ: ಭಾರತದ ರಾಷ್ಟ್ರೀಯ ಲಾಂಛನದಲ್ಲಿರುವ "ಸತ್ಯ ಮೇವ ಜಯತೇ" ಎಂಬ ದ್ಯೇಯ ವಾಕ್ಯವನ್ನು ಮಾತುಗಳಲ್ಲಿ ಎಲ್ಲರೂ ಹೇಳುತ್ತಾರೆ. ಸಮಾಜ ಬದಲಾವಣೆ ಆಗಬೇಕೆಂಬ ಆಲೋಚನೆ ಪ್ರತಿಯೊಬ್ಬರಲ್ಲೂ ಇದೆ. ವೈಜ್ಞಾನಿಕ ಚಿಂತನೆ ಮೂಲಕ ಕಾರ್ಯಸಿದ್ಧಿಗಾಗಿ ಪ್ರಯತ್ನಿಸಬೇಕು ಎಂದು ಮಾಜಿ ಸಂಸದ ಹಾಗೂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಚಂದ್ರಕಾoತ್ ಕೆಳಮನಿ ವಯೋನಿವೃತ್ತಿ ನಿಮಿತ್ತ ಸಸ್ಯಶಾಸ್ತ್ರ ವಿಭಾಗದ ಬೋಸ್ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಾಡುವ ಕೆಲಸ, ಆಚಾರ ವಿಚಾರಗಳು ಕೇವಲ ಮಾತಿಗೆ ಸೀಮಿತವಾಗಿದ್ದು, ಕಾರ್ಯದಲ್ಲಿ ಅದು ಶೂನ್ಯವಾಗಿದೆ. ಆದರಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಸಾಮರ್ಥ್ಯವನ್ನು ಸಾಧನೆ ಮೂಲಕ ಕಾರ್ಯಗತಗೊಳಿಸಬೇಕೆಂದು ಕಿವಿಮಾತು ಹೇಳಿದರು.
ಡಾ. ಪಿ.ಎಸ್. ಶಂಕರ ಪ್ರತಿಷ್ಠಾನದ ಸಂಸ್ಥಾಪಕ ಡಾ. ಪಿ.ಎಸ್. ಶಂಕರ ಅವರು ಮಾತನಾಡಿ, ಪ್ರೊ. ಚಂದ್ರಕಾoತ್ ಕೆಳಮನಿ ಸದ್ಭಾವನಾ ಜೀವಿ. ಬೋಧನೆ ಮತ್ತು ಸಂಶೊಧನೆ ಮೂಲಕ ಉತ್ಕೃಷ್ಟ ಪ್ರಕಟಣೆ ಮಾಡಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ಬೆಳೆಸಿದ್ದಾರೆ. ಬಹುಶಿಸ್ತೀಯ ನೆಲೆಯಲ್ಲಿ ವಿಭಾಗ ಬೆಳೆದಿರುವುದು ಹೆಮ್ಮೆಯ ವಿಷಯ. ಗುರು ಸ್ಮರಣೆಯಿಂದ ವಿದ್ಯಾರ್ಥಿಗಳು ಗುರುವಿನ ಸಾಧನೆಯ ಮುಕುಟಗಳಾಗಬೇಕು ಎಂದರು.
ಎಸ್ ಬಿ ಕಾಲೇಜಿನ ಪ್ರಾಧ್ಯಾಪಕ ಎಂ.ಎಸ್. ಜೋಗದ್ ಮಾತನಾಡಿ, ಪ್ರೊ. ಕೆಳಮನಿ ಅವರನ್ನು ವಿದ್ಯಾರ್ಥಿ, ಸಹಪಾಠಿ ಮತ್ತು ಸ್ನೇಹಿತನಾಗಿ ಕಂಡಿದ್ದೇನೆ. ಕೆಲಸದಲ್ಲಿ ಶಿಸ್ತು, ತಾಳ್ಮೆ ಮತ್ತು ಸಹೃದಯತೆಯುಳ್ಳ ಶಿಕ್ಷಕ. ಓದು, ಕಲಿಕೆ ಮತ್ತು ಸಂಶೊಧನೆ ಮೂಲಕ ವಿಭಾಗ ಮತ್ತು ವಿದ್ಯಾರ್ಥಿ ಬಳಗವನ್ನು ಬೆಳಸಿದ್ದಾರೆ. ಇವರ ಶಿಷ್ಯ ಬಳಗ ದೇಶದ ಸರ್ಕಾರಿ ಮತ್ತು ಶ್ರೇಷ್ಠ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಳಮನಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು.
ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಮಾತನಾಡಿ, ಪ್ರೊ. ಕೆಳಮನಿ ಇವರಿಗೆ ವಿಭಾಗದ ಬಗ್ಗೆ ಅತೀವ ಕಾಳಜಿಯಿತ್ತು. ವಿಶ್ವವಿದ್ಯಾಲಯದ ಮತ್ತು ವಿಭಾಗದ ಜವಾಬ್ದಾರಿಗಳನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. 25 ವರ್ಷಗಳ ಸೇವೆಯಲ್ಲಿ ನಮ್ಮೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಪ್ರೀತಿ ಮತ್ತು ಕರಣೆ ಸ್ವಬಾವ ಇವರಿಗಿತ್ತು. ಇವರ ನಿವೃತ್ತಿ ಜೀವನದೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸಲಿ ಎಂದು ಹೇಳಿದರು.
ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾoತ್ ಕೆಳಮನಿ ಮಾತನಾಡಿ, ಸಾಮಾನ್ಯ ಕುಟುಂಬದಿoದ ಬೆಳೆದ ನಾನು ನನ್ನ ಸಾಧನೆಗೆ ತಂದೆ ತಾಯಿ, ಗುರುಗಳು ಮತ್ತು ಸ್ನೇಹಿತರ ಪ್ರೋತ್ಸಾಹದಿಂದ ವಿಶ್ವವಿದ್ಯಾಲಯದವರೆಗೂ ಬೆಳೆಯಲು ಕಾರಣವಾಯಿತು. ಗುರುಗಳಾದ ಪ್ರೊ. ಪಡಶೆಟ್ಟಿ ಅವರ ಮಾರ್ಗದರ್ಶನದಿಂದ ಒಬ್ಬ ವಿಜ್ಞಾನಿಯಾಗಿ ಬೆಳೆಯಲು ಸಾಧ್ಯವಾಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಸಂಘಟನಾ ಕಾರ್ಯದರ್ಶಿ ಪ್ರೊ. ಎಂ.ಬಿ. ಸುಲೋಚನಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ಡಾ. ನಿರ್ಮಲ ಕೆಳಮನಿ ಉಪಸ್ಥಿತರಿದ್ದರು. ಪ್ರೊ. ಜಿ.ಎಂ. ವಿದ್ಯಾಸಾಗರ್, ಪ್ರೊ. ಆನಂದ ನಾಯಕ್, ಪ್ರೊ. ಪ್ರಕಾಶ್ ಕರಿಯಜ್ಜನವರ್, ಪ್ರೊ. ವಿಜಯಕುಮಾರ್ ಮಲಶೆಟ್ಟಿ, ಪ್ರೊ. ಶಶಿಕಾಂತ್ ಮಜ್ಜಿಗೆ, ವಿಶ್ರಾಂತ ಕುಲಪತಿ ಪ್ರೊ. ದಯಾನಂದ ಅಗಸರ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ. ಲಿಂಗಪ್ಪ, ಪ್ರೊ. ಶಿವಣ್ಣ, ಪ್ರೊ. ಚಂದ್ರಕಾಂತ್ ಯಾತನೂರ ಸೇರಿದಂತೆ ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ಹಳೆಯ ವಿದ್ಯಾರ್ಥಿ ಬಳಗ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸಿದ್ದರು.