×
Ad

ಕಲಬುರಗಿ | ಸುಸೂತ್ರವಾಗಿ ನಡೆದ NEET ಮರುಪರೀಕ್ಷೆ

Update: 2026-06-21 21:29 IST

ಕಲಬುರಗಿ: ದೇಶಾದ್ಯಂತ ನಡೆಯುತ್ತಿರುವ ನೀಟ್ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ಯಾವುದೇ ಅಡಚಣೆಗಳಿಲ್ಲದೆ ರವಿವಾರ ನಡೆಯಿತು.  

ಜಿಲ್ಲೆಯಲ್ಲಿ ಒಟ್ಟು 20 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಕಲಬುರಗಿ ನಗರ ಪ್ರದೇಶದಲ್ಲಿ 16 ಕೇಂದ್ರಗಳು ಹಾಗೂ ಆಳಂದ ತಾಲೂಕಿನ ಕಡಗಂಚಿಯಲ್ಲಿ 4 ಕೇಂದ್ರಗಳು ಕಾರ್ಯನಿರ್ವಹಿಸಿದವು. ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ನಡೆಸಲಾಯಿತು. ಪ್ರತಿಯೊಂದು ಪರೀಕ್ಷಾ ಕೋಣೆಯಲ್ಲಿ ಗರಿಷ್ಠ 24 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿತ್ತು.

ಅಕ್ರಮ ಹಾಗೂ ಅನ್ಯಕ್ರಮಗಳನ್ನು ತಡೆಯುವ ಉದ್ದೇಶದಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿತ್ತು. ಜೊತೆಗೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಅವರು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಪರೀಕ್ಷೆಗೆ ಒಟ್ಟು 8,052 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಅದರಲ್ಲಿ 6,753 ಮಂದಿ ಹಾಜರಾಗಿ ಪರೀಕ್ಷೆ ಬರೆದರು. 1,299 ಅಭ್ಯರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾ ಉಸ್ತುವಾರಿ ಅಧಿಕಾರಿ ಮೂಲಗಳು ತಿಳಿಸಿವೆ.

ಪರೀಕ್ಷಾರ್ಥಿಗಳಿಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಪ್ರವೇಶಾವಕಾಶ ನೀಡಲಾಗಿತ್ತು. ಪ್ರವೇಶದ್ವಾರದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ತಪಾಸಣೆಗೊಳಪಡಿಸಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. ಸಾಮಾನ್ಯ ಅಭ್ಯರ್ಥಿಗಳಿಗೆ ಮಧ್ಯಾಹ್ನ 2 ರಿಂದ ಸಂಜೆ 5.15ರ ವರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಅಂಗವಿಕಲ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲಾಗಿದ್ದು, ಸಂಜೆ 6.20ರವರೆಗೆ ಪರೀಕ್ಷೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News