×
Ad

ಕಲಬುರಗಿ | ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಯೋಗ ದಿನಾಚರಣೆ

Update: 2026-06-21 19:53 IST

ಕಲಬುರಗಿ: ಯೋಗಾಭ್ಯಾಸವು ದೈಹಿಕ ಸದೃಢತೆ, ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಹಾಗೂ ಆಂತರಿಕ ಶಾಂತಿಯನ್ನು ಬೆಳೆಸುವ ಜೀವನ ಪದ್ಧತಿಯಾಗಿದ್ದು, ಇಂದಿನ ಆಧುನಿಕ ಹಾಗೂ ಒತ್ತಡದ ಜೀವನಶೈಲಿಗೆ ಯೋಗವೇ ಪರಿಣಾಮಕಾರಿ ಪರಿಹಾರವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ಅದು ಸಮಗ್ರ ಆರೋಗ್ಯ, ಆತ್ಮಶಿಸ್ತು ಮತ್ತು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ ಜೀವನಶೈಲಿಯಾಗಿದೆ ಎಂದು ಹೇಳಿದರು.

ಇಂದಿನ ವೇಗದ, ತಂತ್ರಜ್ಞಾನ ಆಧಾರಿತ ಜೀವನದಲ್ಲಿ ಮಾನಸಿಕ ಒತ್ತಡ, ಆತಂಕ ಹಾಗೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಯೋಗವು ದೈನಂದಿನ ಒತ್ತಡ ನಿರ್ವಹಣೆ ಮತ್ತು ದೈಹಿಕ-ಮಾನಸಿಕ ಆರೋಗ್ಯ ವೃದ್ಧಿಗೆ ಪರಿಣಾಮಕಾರಿ ಸಾಧನವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ ಮಾತನಾಡಿ, ಯೋಗದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದರು. ಮಧುಮೇಹ, ಒತ್ತಡ ಸೇರಿದಂತೆ ಜೀವನಶೈಲಿ ಸಂಬಂಧಿತ ಅನೇಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಜಕುಮಾರ ಬಾಳಿ ಅವರು ಯೋಗದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ವಿಶ್ರಾಂತಿ ವಿಧಾನಗಳ ಕುರಿತು ಮಾಹಿತಿ ನೀಡುವುದರೊಂದಿಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ ನೀಡಿದರು.

ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಜಿ. ಆರ್. ಅಂಗಡಿ ಸ್ವಾಗತ ಭಾಷಣ ಮಾಡಿದರು. ಡಾ. ವಿ. ಸಾಯಿ ಅಭಿನವ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News