ಕಲಬುರಗಿ | ಕರ್ನಾಟಕ ರಾಜ್ಯ ಅಂಡರ್-19 ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಶಿಪ್
ಕಲಬುರಗಿ: ಕರ್ನಾಟಕ ರಾಜ್ಯ ಚೆಸ್ ಅಸೋಶಿಯೇಶನ್, ಗುಲ್ಬರ್ಗಾ ಜಿಲ್ಲಾ ಚೆಸ್ ಅಸೋಶಿಯೇಶನ್ ಹಾಗೂ ಪ್ರಮೋದ್ ಚೆಸ್ ಅಕಾಡೆಮಿ ಇದರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕೋರ್ಟ್ ರಸ್ತೆಯ ಎಸ್‌ಆರ್‌ಎನ್ ಮೆಹ್ತಾ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಅಂಡರ್-19 ಓಪನ್ ಹಾಗೂ ಗರ್ಲ್ಸ್ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಶಿಪ್–2026 ಟೂರ್ನಿ ಯಶಸ್ವಿಯಾಗಿ ನಡೆಯಿತು.
ಮೂರು ದಿನಗಳ ಕಾಲ ನಡೆದ ಈ ಪ್ರತಿಷ್ಠಿತ ರಾಜ್ಯಮಟ್ಟದ ಚೆಸ್ ಟೂರ್ನಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 200 ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯ ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಒಟ್ಟು 9 ಸುತ್ತುಗಳ ಪಂದ್ಯಗಳು ನಡೆದಿದ್ದು, ಅಂಡರ್-19 ಓಪನ್ ಮತ್ತು ಬಾಲಕಿಯರ ವಿಭಾಗಗಳಲ್ಲಿ ಆಟಗಾರರು ತೀವ್ರ ಪೈಪೋಟಿ ನಡೆಸಿದರು.
ಕಾರ್ಯಕ್ರಮಕ್ಕೆ ಖ್ಯಾತ ಗ್ರ್ಯಾಂಡ್‌ಮಾಸ್ಟರ್ ಡಿ.ವಿ ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು. ಯುವ ಪ್ರತಿಭೆಗಳನ್ನು ಉತ್ತೇಜಿಸುವ ಇಂತಹ ಸ್ಪರ್ಧೆಗಳು ರಾಜ್ಯದಲ್ಲಿ ಚೆಸ್ ಕ್ರೀಡೆಯ ಬೆಳವಣಿಗೆಗೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಟೂರ್ನಿಯ ಸ್ಪರ್ಧೆಗಳನ್ನು ಅಂತರರಾಷ್ಟ್ರೀಯ ಆರ್ಬಿಟ್ರಾರ್ ಪ್ರಮೋದ್ ರಾಜ್ ಮೋರೆ, ಎಸ್‌ಎನ್‌ಎ ಜ್ಞಾನದೀಪ್ ಎಂ., ಅಂತರರಾಷ್ಟ್ರೀಯ ಆರ್ಬಿಟ್ರಾರ್ ಪ್ರಾಣೇಶ್ ಯಾದವ್ ಹಾಗೂ ಉಪ ಆರ್ಬಿಟ್ರಾರ್ ಓಂಕಾರ್ ದಂಡೋತಿ ಅವರು ನಿರ್ವಹಿಸಿದರು.