ಜೇವರ್ಗಿ ಬಳಿ ಸರಣಿ ಅಪಘಾತ: ಲಾರಿ–ಎರಡು ಕಾರುಗಳ ನಡುವೆ ಢಿಕ್ಕಿ
ಜೇವರ್ಗಿ: ಜೇವರ್ಗಿ–ಕಲಬುರಗಿ ಮಾರ್ಗದ ಕಟ್ಟಿ ಸಂಗಾವಿ ಸಮೀಪದ ಹಸನಾಪುರ ಕ್ರಾಸ್ ಬಳಿ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐಸರ್ ಲಾರಿ ಹಾಗೂ ಎರಡು ಕಾರುಗಳ ನಡುವೆ ಸರಣಿ ಢಿಕ್ಕಿಯಾಗಿದೆ.
ಕಲಬುರಗಿ ಕಡೆಯಿಂದ ಜೇವರ್ಗಿ ಕಡೆಗೆ ಅತಿವೇಗವಾಗಿ ಬರುತ್ತಿದ್ದ ಐಸರ್ ಲಾರಿ, ಜೇವರ್ಗಿಯಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಹಾಗೂ ನೆಕ್ಸಾ ಕಾರುಗಳಿಗೆ ರಭಸವಾಗಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ಸಂಪೂರ್ಣ ಜಖಂಗೊಂಡಿವೆ.
ಅಪಘಾತದಲ್ಲಿ ಐಸರ್ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೆಕ್ಸಾ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನಲ್ಲಿದ್ದ ಇತರ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಅಪಘಾತದಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ತಿಳಿದು ಫರತಾಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.