ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಘೋಷಿಸುವಂತೆ ಜೈ ಕನ್ನಡಿಗರ ಸೇನೆ ಆಗ್ರಹ

Update: 2026-08-12 19:22 IST

ಕಲಬುರಗಿ: ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಮರ್ಪಕ ಮಳೆಯಾಗದೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಜೈ ಕನ್ನಡಿಗರ ಸೇನೆ ಆಗ್ರಹಿಸಿದೆ.

ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ದತ್ತು ಹೆಚ್. ಭಾಸಗಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು.

ಮಳೆ ಕೊರತೆಯಿಂದ ತೊಗರಿ, ಉದ್ದು, ಸೋಯಾ, ಹೆಸರು ಸೇರಿದಂತೆ ಮುಂಗಾರು ಬೆಳೆಗಳ ಬಿತ್ತನೆ ಹಾಗೂ ಬೆಳವಣಿಗೆಗೆ ತೀವ್ರ ಹಿನ್ನಡೆಯಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೂಲಿಕಾರ್ಮಿಕರು ಹಾಗೂ ಬಡಜನರು ಉದ್ಯೋಗ ಅರಸಿ ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖಂಡರು ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿಯಂತೆ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡುವುದರ ಜೊತೆಗೆ ಸಂಪೂರ್ಣ ಸಾಲಮನ್ನಾ ಮಾಡಬೇಕು. ಜಾನುವಾರುಗಳಿಗೆ ಮೇವು ಒದಗಿಸಲು ತಕ್ಷಣ ಗಂಜಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ, ಕಾರ್ಯಕರ್ತರಾದ ಕೃಷ್ಣ ಅಣ್ಣೆರಾವ, ಅಕ್ಷಯ, ಸಂತೋಷ ಬೆಳೆಪ್ಪ ಮಾಂಗ್, ಭಾಗೇಶ ಧರ್ಮಣ್ಣ, ಪ್ರಕಾಶ ನಿಂಗಪ್ಪ, ಜಗತ್ ಸಿಂಗ್, ರಾಹುಲ್ ಶಂಕರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News