ಚಿಂಚೋಳಿ | ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಶೂ–ಸಾಕ್ಸ್ ವಿತರಣೆ
ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (ಕೆಪಿಎಸ್) ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಶೂ–ಸಾಕ್ಸ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ ಜಹಿರೋದ್ದಿನ್ ಪಟೇಲ್ ಅವರು ವಿದ್ಯಾರ್ಥಿಗಳಿಗೆ ಶೂ–ಸಾಕ್ಸ್ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳ ಜತೆಗೆ ಅಗತ್ಯವಾದ ಪಾದರಕ್ಷೆಗಳನ್ನು ಉಚಿತವಾಗಿ ಒದಗಿಸುತ್ತಿರುವುದು ಸ್ವಾಗತಾರ್ಹ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಆರ್ಥಿಕ ನೆರವಾಗುವುದರ ಜತೆಗೆ, ವಿದ್ಯಾರ್ಥಿಗಳಲ್ಲಿ ಸಮಾನತೆ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಮಕ್ಕಳು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹಾಗೂ ದಾಖಲಾತಿ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. 2026–27ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ–ಸಾಕ್ಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಮಕ್ಕಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯ ಫಯಾಜ್, ಮುಗು ಸರುಬಾಯಿ, ಉಪನ್ಯಾಸಕ ಜಗನ್ನಾಥ ಕೆ., ಅನುರಾಧ, ರಮೇಶ ಶೇಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.