ಜೇವರ್ಗಿ, ಯಡ್ರಾಮಿಯನ್ನು ಬರಗಾಲ ಪ್ರದೇಶವೆಂದು ಘೋಷಿಸಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಿ: ಶಿವರಾಜ ಪಾಟೀಲ
ಜೇವರ್ಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿ, ಮಧ್ಯಂತರ ಪರಿಹಾರವಾಗಿ ಪ್ರತಿ ಎಕರೆಗೆ 50 ಸಾವಿರ ರೂ. ನೀಡಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಆಗ್ರಹಿಸಿದರು.
ಜೇವರ್ಗಿ ಬಿಜೆಪಿ ಮಂಡಲ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ವರ್ಷ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರಾಗಿರುವ ಡಾ. ಅಜಯಸಿಂಗ್ ಅವರು ರೈತರ ಪರವಾಗಿ ಬರಗಾಲ ಘೋಷಣೆ ಮಾಡಿಸುವ ಬದಲು ಅದ್ಧೂರಿ ಮೆರವಣಿಗೆಯಲ್ಲಿ ತೊಡಗಿರುವುದು, ಅವರಿಗೆ ಅಧಿಕಾರವೇ ಮುಖ್ಯವಾಗಿದ್ದು ರೈತರ ಹಿತ ಮುಖ್ಯವಲ್ಲ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ರೈತರ ನೋವಿಗೆ ಸ್ಪಂದಿಸದ ಸಚಿವರಿಗೆ ರೈತರ ಶಾಪ 2028ರ ಚುನಾವಣೆಯಲ್ಲಿ ತಟ್ಟಲಿದೆ. ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜೇವರ್ಗಿ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅಗತ್ಯವಾದ ಶಿಕ್ಷಣ ಸಂಸ್ಥೆಗಳು ಹಾಗೂ ಸಮರ್ಪಕ ವಸತಿ ನಿಲಯಗಳ ಕೊರತೆಯಿಂದ ಅನೇಕ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಸಚಿವರು ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಲ್ಯಾಂಡ್ ಆರ್ಮಿ ಮೂಲಕ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು. ಪಿಡಬ್ಲ್ಯುಡಿ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿಯೂ ಗೋಲ್‌ಮಾಲ್ ನಡೆಸಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
ಸೆ.15ರೊಳಗೆ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿ, ಪ್ರತಿ ಎಕರೆಗೆ 50 ಸಾವಿರ ರೂ. ಮಧ್ಯಂತರ ಪರಿಹಾರ ನೀಡಬೇಕು. ಬೆಳೆ ವಿಮೆಯಿಂದ ವಂಚಿತರಾದ ರೈತರಿಗೆ ತಕ್ಷಣ ವಿಮಾ ಮೊತ್ತ ಬಿಡುಗಡೆ ಮಾಡಬೇಕು, ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ, ತಹಸೀಲ್ದಾರ್ ಅಂಜುಮ ತಬಸುಮ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದೇವಿಂದ್ರ ಮುತ್ತಕೋಡ, ಮಲ್ಲಿನಾಥಗೌಡ ಯಲಗೋಡ, ಶೋಭಾ ಭಾಣಿ, ಮರೆಪ್ಪ ಬಡಿಗೇರ, ರೇವಣಸಿದ್ದಪ್ಪ ಸಂಕಾಲಿ, ಮಲ್ಲಣ್ಣಗೌಡ ಪಾಟೀಲ ರದ್ದೇವಾಡಗಿ, ನಿಂಗಣ್ಣ ದೊಡಮನಿ, ಹಣಮಂತ್ರಾಯ ಹೂಗಾರ, ಬಾಪುಗೌಡ ಪಾಟೀಲ ಬಿರಾಳ, ಗುರುರಾಜ ನರಿಬೋಳ, ಭೀಮಾಶಂಕರ ಕುರಡೆಕರ್, ಭಾಗಪ್ಪ ಯಲಗೋಡ, ಶಿವಪುತ್ರ ಕೊಣಿನ್, ಮಲ್ಲಣ್ಣ ಕುಲಕರ್ಣಿ, ಸಿದ್ದು ದ್ಯಾಮ, ಗುಂಡು ಸಾಹು ಗೋಗಿ, ರಾಜಶೇಖರ ಗೌನಳ್ಳಿ, ವಿಶ್ವರಾಧ್ಯ ಬಡಿಗೇರ, ತಿಪ್ಪಣ್ಣ ರಾಠೋಡ, ಸಂತೋಷ ಮಲ್ಲಾಬಾದ, ರಾಜು ರದ್ದೆವಾಡಗಿ, ಹಣಮಂತ ಶಾಬಾದಿ, ಖಯುಮ್ ಜಮದಾರ್, ಬಾಬಾ ಪಟೇಲ್, ಈಶ್ವರ ಹಿಪ್ಪರಗಿ, ನಿಂಗಣ್ಣ ರದ್ದೇವಾಡಗಿ, ಅನಿಲಕುಮಾರ ದೊಡಮನಿ, ವಿಶ್ವ ಆಲೂರ, ಬಸವರಾಜ ಮದ್ರಕಿ, ಶ್ರೀಕಾಂತ ಬಡಿಗೇರ ಆಂದೊಲ, ಸಂತೋಷ ಕಟ್ಟಿಮನಿ, ಎಂ ಡಿ ಸಮೀರ್ ಸೇರಿದಂತೆ ಇತರರು ಇದ್ದರು.