ಚಿತ್ತಾಪುರ: ಬಸ್ ನಿಲ್ದಾಣದಿಂದ ದಿಗ್ಗಾಂವ ಗ್ರಾಮಕ್ಕೆ ಸಂಚರಿಸುವ ಎಲ್ಲ ಸಾರಿಗೆ ಬಸ್‌ಗಳನ್ನು ಮಾರ್ಗ ಮಧ್ಯದಲ್ಲಿರುವ ದಿಗ್ಗಾಂವ ಕ್ರಾಸ್‌ನ ಕೆಸಿಎಲ್ ಫ್ಯಾಕ್ಟರಿ ಬಳಿ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮೀಕಾಂತ್ ತಾಂಡೂರಕರ್ ಅವರು ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಚಿತ್ತಾಪುರ ಬಸ್ ನಿಲ್ದಾಣದಿಂದ ದಿಗ್ಗಾಂವ ಗ್ರಾಮಕ್ಕೆ ನಿತ್ಯ ಸಂಚರಿಸುವ ಸಾರಿಗೆ ಬಸ್‌ಗಳು ದಿಗ್ಗಾಂವ ಕ್ರಾಸ್‌ನ ಕೆಸಿಎಲ್ ಫ್ಯಾಕ್ಟರಿ ಬಳಿ ನಿಲ್ಲದೆ ತೆರಳುತ್ತಿವೆ. ಈ ಭಾಗದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಂಡಿರುವ 320 ಮನೆಗಳಲ್ಲಿ ಅನೇಕ ಕುಟುಂಬಗಳು ವಾಸಿಸುತ್ತಿದ್ದು, ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಿದ್ದರೂ ಬಸ್‌ಗಳು ನಿಲ್ಲುತ್ತಿಲ್ಲ ಎಂದು ಅವರು ದೂರಿದರು.

ಬಸ್‌ಗಳು ನಿಲ್ಲದ ಕಾರಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಕಾರ್ಮಿಕರು ಕೂಡ ಸಂಚಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಹಿತದೃಷ್ಟಿಯಿಂದ ದಿಗ್ಗಾಂವ ಕ್ರಾಸ್‌ನ ಕೆಸಿಎಲ್ ಫ್ಯಾಕ್ಟರಿ ಬಳಿ ಎಲ್ಲ ಸಾರಿಗೆ ಬಸ್‌ಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮನವಿಗೆ ಸ್ಪಂದಿಸಿದ ಬಸ್ ಘಟಕ ವ್ಯವಸ್ಥಾಪಕ ಜಿ. ಬಿರಾದಾರ ಅವರು, ಅಗತ್ಯ ಕ್ರಮ ಕೈಗೊಂಡು ಆ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರಿಗೆ ಸೂಕ್ತ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor