Kalaburagi | ರಸಪ್ರಶ್ನೆ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಾಮಾನ್ಯ ಜ್ಞಾನ ಹೆಚ್ಚಿಸುತ್ತವೆ : ಪ್ರೊ.ಅರುಣಕುಮಾರ ಪಾಟೀಲ
ಹೆರಿಟೇಜ್ ಕ್ವಿಜ್-2026: ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ
ಕಲಬುರಗಿ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ ಎಂದು ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಅರುಣಕುಮಾರ ಪಾಟೀಲ ಹೇಳಿದರು.
ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇನ್‌ಟ್ಯಾಕ್) ಕಲಬುರಗಿ ಅಧ್ಯಾಯ ಹಾಗೂ ಮಿಲೇನಿಯಂ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಹೆರಿಟೇಜ್ ಕ್ವಿಜ್–2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ. ಕಲ್ಲಿನಾಥ ಪಾಟೀಲ ಮಾತನಾಡಿ, ಇನ್‌ಟ್ಯಾಕ್ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿ ಶೈಕ್ಷಣಿಕ ಪ್ರವಾಸ, ಪಾರಂಪರಿಕ ನಡಿಗೆ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ರಸಪ್ರಶ್ನೆಯಂತಹ ಕಾರ್ಯಕ್ರಮಗಳು ಮಕ್ಕಳ ಸಾಮಾನ್ಯ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಎಸ್. ಗುಲಶೆಟ್ಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯವಾದ ಜ್ಞಾನ ಮತ್ತು ವಿಚಾರಶಕ್ತಿಯನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.
ಇನ್‌ಟ್ಯಾಕ್ ಕಲಬುರಗಿ ಅಧ್ಯಾಯದ ಸಂಯೋಜಕ ಡಾ. ಶಂಭುಲಿಂಗ ಎಸ್. ವಾಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಶಿಶೇಖರ ರೆಡ್ಡಿ ವಂದನಾರ್ಪಣೆ ಸಲ್ಲಿಸಿದರು.
ನಗರದ ಒಂಬತ್ತು ಶಾಲೆಗಳ ಸುಮಾರು 125 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಸಿ, ಅದರಲ್ಲಿ ಆಯ್ಕೆಯಾದ 10 ತಂಡಗಳಿಗೆ ಅಂತಿಮ ಸುತ್ತಿನಲ್ಲಿ ಐದು ಹಂತಗಳಲ್ಲಿ ಮೌಖಿಕ ಪ್ರಶ್ನೆಗಳನ್ನು ಕೇಳಲಾಯಿತು.
ವಿಶ್ರಾಂತ ಪ್ರಾಧ್ಯಾಪಕ ಡಾ. ಶಶಿಶೇಖರ ರೆಡ್ಡಿ ಅವರು ರಸಪ್ರಶ್ನೆ ಕಾರ್ಯಕ್ರಮವನ್ನು ಆಕರ್ಷಕವಾಗಿ ನಡೆಸಿಕೊಟ್ಟರು. ಪ್ರೊ. ಚಂದ್ರಶೇಖರ ಅನಾದಿ ಸಹಕರಿಸಿದರು.
ಸ್ಪರ್ಧೆಯಲ್ಲಿ ಅಪ್ಪಾ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಎಸ್.ವಿ. ದರ್ಶನ ಮತ್ತು ಮಹಮ್ಮದ್ ಅಬೂಬಕರ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಹೆರಿಟೇಜ್ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾದರು.
ಮಿಲೇನಿಯಂ ಆಂಗ್ಲ ಶಾಲೆಯ ಸೋಹನ್ ಮತ್ತು ನಯನ್ ದ್ವಿತೀಯ ಸ್ಥಾನ ಪಡೆದರೆ, ಎಸ್.ಎಂ. ಶಾಲೆಯ ಮುಜಾಮಿಲ್ ಮತ್ತು ಮನೀಷ್ ಎಂ. ತೃತೀಯ ಸ್ಥಾನ ಗಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಇನ್‌ಟ್ಯಾಕ್ ವತಿಯಿಂದ ಪ್ರಮಾಣಪತ್ರ ಹಾಗೂ ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ವಿತರಿಸಲಾಯಿತು.