Kalaburagi | ಎಸ್‌ಐಆರ್ ಸ್ಥಗಿತಗೊಳಿಸಿ, ಮತದಾರರ ಹಕ್ಕು ಮರುಸ್ಥಾಪಿಸಲು ಸಿಪಿಐ ಆಗ್ರಹ
ಕಲಬುರಗಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಹಾಗೂ ತಪ್ಪಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿರುವ ಅರ್ಹ ಮತದಾರರ ಮತದಾನದ ಹಕ್ಕನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಪ್ರತಿಭಟನೆ ನಡೆಸಿದ ಸಿಪಿಐ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಚುನಾವಣಾ ಆಯೋಗದ ಸ್ವತಂತ್ರ ಹಾಗೂ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಮರುಸ್ಥಾಪಿಸಲು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗದ ಮೂವರು ಆಯುಕ್ತರಲ್ಲಿ ಇಬ್ಬರು ವಿವಿಧ ಸಂದರ್ಭಗಳಲ್ಲಿ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ, ಮರುಸ್ಥಾಪನೆ ಹಾಗೂ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ನಿರ್ಧಾರಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಸಿಪಿಐ ಮುಖಂಡರು ಹೇಳಿದರು. ಈ ಬೆಳವಣಿಗೆಗಳು ಚುನಾವಣಾ ಆಯೋಗದ ನಿರ್ಧಾರ ಪ್ರಕ್ರಿಯೆ, ಪಾರದರ್ಶಕತೆ ಹಾಗೂ ಮತದಾರರ ದತ್ತಾಂಶ ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಅವರು ಆರೋಪಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ತಪ್ಪಾಗಿ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು. ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ಪ್ರಜೆಯ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದ್ದು, ಅದನ್ನು ಅಪಾರದರ್ಶಕ ಅಥವಾ ಕೇಂದ್ರೀಕೃತ ಪ್ರಕ್ರಿಯೆಗಳ ಮೂಲಕ ನಿರ್ಬಂಧಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಸ್ವಾತಂತ್ರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಆಯ್ಕೆ ಸಮಿತಿಯ ಮೂಲಕ ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಿಪಿಐ ಜಿಲ್ಲಾ ಘಟಕ ಮನವಿಯಲ್ಲಿ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶಕುಮಾರ ರಾಠೋಡ, ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ, ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಜಿಲ್ಲಾ ಖಜಾಂಚಿ ಭೀಮಾಶಂಕರ ಮಾಡಿಯಾಳ, ನಗರ ಕಾರ್ಯದರ್ಶಿ ಸಾಜೀದ್ ಅಹಮದ್, ಮಹಮ್ಮದ್ ಚೌದರಿ, ಮಲ್ಲಿಕಾರ್ಜುನ ಕೆಲ್ಲೂರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.