ಚಿಂಚೋಳಿ: ತಾಲೂಕಿನಲ್ಲಿ ಸಂಭವಿಸಿರುವ ಬೆಳೆಹಾನಿಗೆ ಸಂಬಂಧಿಸಿದಂತೆ 46,606 ಹೆಕ್ಟೇರ್ ಪ್ರದೇಶದ ಬೆಳೆಹಾನಿ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ತಾಲೂಕು ಆಡಳಿತ ಹಾಗೂ ಕುಂಚಾವರಂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ‘ಪ್ರಜಾಸೇವೆ ಆಂದೋಲನ’ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಬೆಳೆಹಾನಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ಫಾರ್ಮರ್ ಐಡಿ (ಎಫ್‌ಐಡಿ) ಮಾಡಿಸಿಕೊಳ್ಳಬೇಕು. ಎಫ್‌ಐಡಿ ನೋಂದಣಿ ಪೂರ್ಣಗೊಂಡ ನಂತರವೇ ಪರಿಹಾರ ವಿತರಿಸಲು ಸಾಧ್ಯವಾಗುವುದರಿಂದ ರೈತರು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು.

ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಿ, ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ತ್ವರಿತವಾಗಿ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾಸೇವೆ ಆಂದೋಲನ ಜಾರಿಗೊಳಿಸಿದೆ. ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಮಳೆಯ ಕೊರತೆಯಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ನೀರಾವರಿ ಸೌಲಭ್ಯ ಹೊಂದಿರುವ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೇವು ಬೆಳೆ ಬೆಳೆಯಬೇಕು. ರೈತರು ಬೆಳೆದ ಮೇವನ್ನು ಸರ್ಕಾರದ ವತಿಯಿಂದ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಚೌಹಾಣ್ ಮಾತನಾಡಿ, ವಿಕಸಿತ ಭಾರತ ಅಭಿಯಾನ ಹಾಗೂ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳಡಿ ರೈತರಿಗೆ ಹಲವು ಸೌಲಭ್ಯಗಳು ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆದು ಅವುಗಳ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಇಒ ದುಳಪ್ಪ ಮಲನೂರ್, ಎಡಿ ವೀರಶೆಟ್ಟಿ ರಾಠೋಡ್, ಡಾ. ಮಲ್ಲಿಕಾರ್ಜುನ ಗುತ್ತೇದಾರ, ಡಾ. ಲತೀಫ್, ಬಿಸಿಎಂ ಅಧಿಕಾರಿ ರಾಹುಲ್ ಪಂಚಶೀಲ, ಸಂಜುಕುಮಾರ ಚೌಹಾಣ್, ಜೆಸ್ಕಾಂನ ಕಾಮಣ್ಣ ಇಂಜಳ್ಳಿ, ಮದರ್ ಸಬ್, ಪಿಡಿಒ ರಾಮಕೃಷ್ಣ ಕೊಂಡಂಪಳ್ಳಿ, ಇಮ್ರಾನ್ ಪಟೇಲ್, ಡಿಎಂ ಸುರೇಶ ತೇಗಲತಿಪ್ಪಿ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಾಜಿ ರಾಠೋಡ್ ಹಾಗೂ ರವೀಂದ್ರ ಮಾನೆ, ಪಿಎಸ್‌ಐ ಶಿವಶಂಕರ ಸುಬೇದಾರ್, ಪ್ರಶಾಂತ್ ಶಿಂದೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor