ಚಿತ್ತಾಪುರ | ಮುಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಭೀಮಣ್ಣ ಸಾಲಿ ಚಾಲನೆ
ಚಿತ್ತಾಪುರ : 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಚಿತ್ತಾಪುರ ವತಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಪ್ರಸ್ತುತ ಚಿತ್ತಾಪುರ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಂಡಿದ್ದು ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇರುವದಿಲ್ಲ ಎಂದು ಪಿಎಲ್'ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಾಂಕೇತಿಕವಾಗಿ ರೈತರಿಗೆ ತೊಗರಿ, ಹೆಸರು ಮತ್ತು ಉದ್ದು ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಿ ಮಾತನಾಡಿದ ಅವರು, ರೈತರು ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಆತಂಕ ಪಡುವ ಅವಕಾಶ ಇರುವುದಿಲ್ಲ, ಕೃಷಿ ಇಲಾಖೆಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.
ನಂತರ ರೈತರು ಬಾಡಿಗೆ ಆಧರಿತ ಸೇವಾ ಕೇಂದ್ರದ ಕೃಷಿ ಉಪಕರಣಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ನಿರ್ದೇಶಕ ಶಿವಶರಣರೆಡ್ಡಿ, ಸಹಾಯಕ ಕೃಷಿ ನಿರ್ದೆಶಕ ಸಂಜೀವಕುಮಾರ ಮಾನಕರ್, ಕೃಷಿ ಅಧಿಕಾರಿಗಳಾದ ರವಿಂದ್ರ ಕುಮಾರ, ಕರಣ ಕುಮಾರ, ಶ್ರೀನಿವಾಸ, ಬಸವರಾಜ ಬಂಗರಗಿ, ಲೆಕ್ಕ ಸಹಾಯಕ ರಾಮು ರಾಠೋಡ, ಸಚಿನ ಕುಮಾರ ಸೇರಿದಂತೆ ವಿವಿಧ ಗ್ರಾಮದ ರೈತರು ಇದ್ದರು.