×
Ad

ಫರಹತಾಬಾದ್‌ನಲ್ಲಿ ತಂಬಾಕು ಉತ್ಪನ್ನ ಮಾರಾಟಗಾರರ ಮೇಲೆ ದಾಳಿ : 26 ಅಂಗಡಿಗಳಿಗೆ 2,660 ರೂ. ದಂಡ

Update: 2026-06-05 20:09 IST

ಕಲಬುರಗಿ : ತಂಬಾಕು ನಿಯಂತ್ರಣ ಕಾಯ್ದೆ (COTPA)–2003ರ ಕಟ್ಟುನಿಟ್ಟಿನ ಅನುಷ್ಠಾನದ ಅಂಗವಾಗಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಫರಹತಾಬಾದ್ ಗ್ರಾಮದಲ್ಲಿ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿ, ಕಾನೂನುಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 26 ಅಂಗಡಿಗಳ ಮೇಲೆ ದಾಳಿ ನಡೆಸಿ 2,660 ರೂ. ದಂಡ ವಸೂಲಿ ಮಾಡಿತು.

ಜಿಲ್ಲಾಧಿಕಾರಿಗಳ ಸಭಾ ನಡವಳಿಕೆ ಆದೇಶದ ಮೇರೆಗೆ ಕಲಬುರಗಿ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಶಾಲೆ-ಕಾಲೇಜುಗಳ 100 ಗಜ ವ್ಯಾಪ್ತಿಯೊಳಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ನಡೆಸುತ್ತಿದ್ದ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಪರಿಶೀಲನೆ ನಡೆಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ ಅವರ ನಿರ್ದೇಶನದಲ್ಲಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಕೇಶ್ ಕಾಂಬಳೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಕಾಂಬಳೆ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂತೋಷ್ ಪಾಟೀಲ ಅವರ ಸಹಕಾರದೊಂದಿಗೆ ದಾಳಿ ನಡೆಸಿ ನಿಯಮ ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಯಿತು.

ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ COTPA ಕಾಯ್ದೆಯ ಸೆಕ್ಷನ್ 4 ಮತ್ತು 6ರ ನಿಯಮಗಳ ಕುರಿತು ಅಂಗಡಿಕಾರರಿಗೆ ಮಾಹಿತಿ ನೀಡಲಾಯಿತು. ಶಾಲಾ-ಕಾಲೇಜುಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಕಾರ್ಯಾಚರಣೆಯಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಪೂಜಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ್ತಿ ಸುಜಾತ ಪಾಟೀಲ ಹಾಗೂ ಅವರ ತಂಡ, ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ್ ಮುಲಜೆ, ಸಾಮಾಜಿಕ ಕಾರ್ಯಕರ್ತೆ ಆರತಿ ಧನಶ್ರೀ, ಡಿಇಒ ರವಿ ಪೂಜಾರಿ, ಬ್ಲಾಕ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿರೂಪಾಕ್ಷಯ್ಯ ಹಿರೇಮಠ, ಸ್ಥಳೀಯ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ತಂಬಾಕು ದುಷ್ಪರಿಣಾಮಗಳ ಅರಿವು :

ಕಾರ್ಯಾಚರಣೆಯ ಅಂಗವಾಗಿ ಫರಹತಾಬಾದ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಂಬಾಕು ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಅದರ ಸಾಮಾಜಿಕ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯನ್ನು “ತಂಬಾಕು ಮುಕ್ತ ಶಾಲೆ” ಎಂದು ಘೋಷಿಸಲಾಯಿತು. ವಿದ್ಯಾರ್ಥಿಗಳಿಂದ ಸಸಿ ನೆಡುವ ಕಾರ್ಯಕ್ರಮ ನಡೆಸಿ, “ಆರೋಗ್ಯವಂತ ಮಗು – ಸದೃಢ ಭಾರತ” ಎಂಬ ಸಂದೇಶ ಸಾರಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News