×
Ad

Kalaburagi | ವಿದ್ಯಾರ್ಥಿಗಳು ಪರಿಸರ, ಜೀವ ಸಂಕುಲ ಸಂರಕ್ಷಣೆಯ ರೂವಾರಿಗಳಾಗಬೇಕು: ಪ್ರೊ.ಜಿ.ಎಂ.ವಿದ್ಯಾಸಾಗರ

Update: 2026-06-05 18:41 IST

ಕಲಬುರಗಿ: ವಿದ್ಯಾರ್ಥಿಗಳು ಪರಿಸರ ಹಾಗೂ ಜೀವ ಸಂಕುಲ ಸಂರಕ್ಷಣೆಯ ರೂವಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಸಂಯೋಜಕ ಪ್ರೊ.ಜಿ.ಎಂ.ವಿದ್ಯಾಸಾಗರ ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಹಾಗೂ ಪ್ರಾಣಿಶಾಸ್ತ್ರ ಸಂಘದ ಆಶ್ರಯದಲ್ಲಿ ಡಾರ್ವಿನ್ ಸಭಾಂಗಣದಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಜೀವವೈವಿಧ್ಯತೆ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಜೀವವೈವಿಧ್ಯತೆ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ವರ್ಷಪೂರ್ತಿ ಪರಿಸರ ಸಂರಕ್ಷಣೆ ಮತ್ತು ಜೀವಿಗಳ ರಕ್ಷಣೆಯಲ್ಲಿ ಕ್ರಿಯಾಶೀಲತೆ ತೋರಬೇಕು ಎಂದರು.

ಜೀವವೈವಿಧ್ಯತೆಯಲ್ಲಿರುವ ಅನೇಕ ವಿಸ್ಮಯಗಳು ವೈಜ್ಞಾನಿಕ ಅಧ್ಯಯನ ಮತ್ತು ಚಿಂತನೆಗೆ ಅವಕಾಶ ನೀಡುತ್ತವೆ. ವಿದ್ಯಾರ್ಥಿಗಳು ಜೀವವೈವಿಧ್ಯತೆಯ ಬಗ್ಗೆ ದೂರದೃಷ್ಟಿಯ ಜ್ಞಾನ ಬೆಳೆಸಿಕೊಳ್ಳಬೇಕು. ಭವಿಷ್ಯದಲ್ಲಿ ಕೀಟಗಳು ಮಾನವನ ಆಹಾರ ಪದ್ಧತಿಯ ಪ್ರಮುಖ ಭಾಗವಾಗುವ ಸಾಧ್ಯತೆಯಿದೆ. ಆದ್ದರಿಂದ ಮಾನವ ಕಲ್ಯಾಣಕ್ಕಾಗಿ ಆರೋಗ್ಯಕರ ಪರಿಸರ ಹಾಗೂ ಜೀವವೈವಿಧ್ಯತೆಯನ್ನು ಸಂರಕ್ಷಿಸಿ ಪೋಷಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಪ್ರಾಣಿಶಾಸ್ತ್ರ ಸಂಘದ ಉಪಾಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ. ಶಶಿಕಾಂತ ಮಜಗಿ, ಈ ವರ್ಷದ ಅಂತರರಾಷ್ಟ್ರೀಯ ಜೀವವೈವಿಧ್ಯತೆ ದಿನಾಚರಣೆಯ ಘೋಷವಾಕ್ಯ “Acting Locally for Global Impact” ಆಗಿದೆ ಎಂದು ತಿಳಿಸಿದರು. ಜೀವಜಗತ್ತು ಅಪಾರ ವೈವಿಧ್ಯತೆಯಿಂದ ಕೂಡಿದ್ದು, ಪ್ರಾಣಿ, ಪಕ್ಷಿ, ಸಸ್ಯ ಹಾಗೂ ಸೂಕ್ಷ್ಮಜೀವಿಗಳ ಅಸ್ತಿತ್ವದಿಂದ ಭೂಮಿಯ ಸೌಂದರ್ಯ ಮತ್ತು ವೈಶಿಷ್ಟ್ಯ ಹೆಚ್ಚಾಗಿದೆ ಎಂದರು.

ಅತಿಥಿ ಉಪನ್ಯಾಸಕಿ ಡಾ. ಸಂಧ್ಯಾ ದಿವಾಕರ ಜೀವವೈವಿಧ್ಯತೆಯ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಜೀವವೈವಿಧ್ಯತೆ ಕುರಿತ ಭಾಷಣ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ವಿಜಯಕುಮಾರ ಮಲಶೆಟ್ಟಿ, ಡಾ.ಶರಣಬಸಪ್ಪ ಪಾಟೀಲ, ಡಾ.ಪರಶುರಾಮ ಕಾಂಬಳೆ, ಡಾ.ಖಸಿಮ ಫಾತಿಮಾ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾಯಾವತಿ ಕಾರ್ಯಕ್ರಮ ನಿರೂಪಿಸಿದರು. ಭಾಗಪ್ಪ ಪ್ರಾರ್ಥನೆ ಸಲ್ಲಿಸಿದರು. ಶಿವಾನಿ ಸ್ವಾಗತಿಸಿದರು. ಭಾಗ್ಯಶ್ರಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News