Kalaburagi | ರಸಗೊಬ್ಬರ ತರಲು ಹೋದ ವ್ಯಕ್ತಿಯ ಕೊಲೆ : ನಾಲ್ವರ ಬಂಧನ
ಶಿವಕುಮಾರ್ ಹೊಸಮನಿ
ಕಲಬುರಗಿ : ರಸಗೊಬ್ಬರ ಖರೀದಿಸಲು ನಗರಕ್ಕೆ ತೆರಳಿದ್ದ ಬಳಿಕ ನಾಪತ್ತೆಯಾಗಿದ್ದ ಅಫಜಲಪುರ ತಾಲೂಕಿನ ಹಾವನೂರು ಗ್ರಾಮದ ಶಿವಕುಮಾರ್ ಹೊಸಮನಿ (35) ಅವರ ಸಾವಿನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇದು ಕೊಲೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.
ಬಂಧಿತರನ್ನು ಬಿದ್ದಾಪುರ ಕಾಲೋನಿಯ ಸಚಿನ್ ಅಲಿಯಾಸ್ ಪ್ರವೀಣಕುಮಾರ್ ಹೂಗಾರ, ಚನ್ನಪ್ಪ ಸೈದಪ್ಪ ಬಬಲಾದ, ಸಚಿನ್ ನಾಗಣ್ಣ ಸುಲ್ತಾನಪುರ ಹಾಗೂ ಶರಣಸಿರಸಗಿ ಗ್ರಾಮದ ಶಿವಕುಮಾರ್ ಹೊಳೆ ಎಂದು ಗುರುತಿಸಲಾಗಿದೆ.
ಶಿವಕುಮಾರ್ ಅವರು ರಸಗೊಬ್ಬರ ತರಲು ಕಲಬುರಗಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ನಂತರ ಅವರ ಶವ ಹಾವನೂರು ಗ್ರಾಮದ ಸಮೀಪ ಪತ್ತೆಯಾಗಿದ್ದು, ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕುಟುಂಬಸ್ಥರು ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಹಲವು ಸುಳಿವುಗಳ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬ್ಯಾನರ್ ಹರಿದಿದ್ದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೊಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.