ಕಲಬುರಗಿ ಜಿಲ್ಲೆಯನ್ನು ತೀವ್ರ ಬರಪೀಡಿತ ಎಂದು ಘೋಷಿಸಲು ಸಿಪಿಐ(ಎಂ) ಆಗ್ರಹ
ಕಲಬುರಗಿ, ಜು. 6: ಕಲಬುರಗಿ ಜಿಲ್ಲೆಯನ್ನು ತಕ್ಷಣವೇ ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಬಳಿಕ ಮುಖ್ಯಮಂತ್ರಿ ಅವರಿಗೆ ಉದ್ದೇಶಿಸಿದ ಮನವಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆ. ನೀಲಾ, ಜಿಲ್ಲೆಯಲ್ಲಿ ಶೇ.25ಕ್ಕಿಂತಲೂ ಕಡಿಮೆ ಬಿತ್ತನೆ ನಡೆದಿದ್ದು, ಮಳೆಯ ಕೊರತೆಯಿಂದ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗದ ಕೊರತೆಯಿಂದ ಗ್ರಾಮೀಣ ಪ್ರದೇಶಗಳ ಜನರು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಬೀಜ ಮತ್ತು ಗೊಬ್ಬರವನ್ನು ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಅಗತ್ಯ ವಸ್ತುಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಅಗತ್ಯ ವಸ್ತುಗಳನ್ನು ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಬಾಕಿ ಇರುವ ಕೂಲಿಯನ್ನು ಇದೇ ವಾರದಲ್ಲಿ ಪಾವತಿಸಿ, ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ದಿನಗಳನ್ನು 100ರಿಂದ 200 ದಿನಗಳಿಗೆ ಹೆಚ್ಚಿಸಬೇಕು. ನಗರ ಪ್ರದೇಶಗಳಿಗೂ ಉದ್ಯೋಗ ಸೃಷ್ಟಿಸುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರೈತರ ಹೊಲಗಳಲ್ಲಿ ರಂಟೆ-ಕುಂಟೆ ನಿರ್ಮಾಣ, ಬಿತ್ತನೆ, ಒಡ್ಡು ನಿರ್ಮಾಣ ಹಾಗೂ ಕಳೆ ತೆಗೆಯುವಂತಹ ಕೃಷಿ ಚಟುವಟಿಕೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸೇರಿಸಿ, ಕನಿಷ್ಠ 1.5 ಎಕರೆವರೆಗೆ ಕೆಲಸಕ್ಕೆ ಅವಕಾಶ ಕಲ್ಪಿಸಬೇಕು. ಇದರಿಂದ ರೈತರ ಮೇಲಿನ ಸಾಲದ ಹೊರೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮನವಿಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಉಚಿತ ಬೀಜ ಹಾಗೂ ಕೇಂದ್ರ ಸರ್ಕಾರ ಉಚಿತ ಗೊಬ್ಬರ ವಿತರಿಸಬೇಕು. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ತಕ್ಷಣ ಮೇವು ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.
ಬರ ಪರಿಹಾರ ಕಾಮಗಾರಿಗಳು ಮಧ್ಯವರ್ತಿಗಳ ಲಾಭದ ಕೇಂದ್ರವಾಗದೆ, ಶ್ರಮಿಕರಿಗೆ ಹೆಚ್ಚಿನ ಉದ್ಯೋಗ ಮತ್ತು ಆದಾಯ ತರುವ ರೀತಿಯಲ್ಲಿ ಜಾರಿಯಾಗಬೇಕು. ಸರ್ಕಾರ ಸಮಗ್ರ ಕಾರ್ಯಯೋಜನೆ ರೂಪಿಸಿ ಜನರನ್ನು ಬರದ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಡಾ. ಮೀನಾಕ್ಷಿ, ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಶ್ರೀಮಂತ ಬಿರಾದಾರ, ಚಂದಮ್ಮ, ಗುರು ಚಾಂದಕವಟೆ, ಪ್ರಭು ಪ್ಯಾರಾಬುದ್ದಿ, ಶಾಂತಾ ಘಂಟಿ, ಲವಿತ್ರ ವಸ್ತ್ರದ, ಪಾಂಡುರಂಗ ಮಾವಿನಕರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.