ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿ : ಶಾಸಕ ಅಲ್ಲಂಪ್ರಭು ಪಾಟೀಲ್
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಜಾಗೃತಿ ವಹಿಸುವಂತೆ ಸಾರ್ವಜನಿಕರಿಗೆ ಮನವಿ
ಕಲಬುರಗಿ : ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಪೂರ್ಣಗೊಳಿಸಿ, ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ದಕ್ಷಿಣ ಸೇರಿದಂತೆ ಜಿಲ್ಲೆಯ ಎಲ್ಲ ಅರ್ಹ ಮತದಾರರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ವೈಯಕ್ತಿಕ ಮಾಹಿತಿಯನ್ನು ದೋಷರಹಿತವಾಗಿ ನವೀಕರಿಸುವುದರಿಂದ ಮಾತ್ರ ಪ್ರಜಾಪ್ರಭುತ್ವದ ಮೂಲಭೂತ ಹಕ್ಕನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಯುವಕರು ಹಾಗೂ ಸಮಾಜದ ಎಲ್ಲ ವರ್ಗದವರು ಎಸ್‌ಐಆರ್ ಪ್ರಕ್ರಿಯೆಗೆ ಆದ್ಯತೆ ನೀಡಬೇಕು. ನಿಗದಿತ ಅವಧಿಯೊಳಗೆ ಮತದಾರರ ಮಾಹಿತಿ ನಮೂನೆಯನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ಸಲ್ಲಿಸಬೇಕು. ಮನೆಗೆ ಭೇಟಿ ನೀಡುವ ಬಿಎಲ್‌ಒಗಳಿಂದ ಅಧಿಕೃತ ಸ್ವೀಕೃತಿ ರಶೀದಿಯನ್ನು ಪಡೆಯುವುದನ್ನೂ ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಎಸ್‌ಐಆರ್ ಫಾರಂ ಅನ್ನು ಪ್ರತಿಯೊಬ್ಬ ಮತದಾರರು ಸ್ವತಃ ಪರಿಶೀಲಿಸಿ ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ತಮ್ಮ ಹೆಸರಿನ ಜೊತೆಗೆ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರ ಹೆಸರುಗಳೂ ಮತದಾರರ ಪಟ್ಟಿಯಲ್ಲಿ ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಅರ್ಹ ಮತದಾರರ ಹೆಸರು ಅನಗತ್ಯವಾಗಿ ಕೈಬಿಡದಂತೆ ಜಾಗೃತಿ ವಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹೆಸರು, ಜನ್ಮ ದಿನಾಂಕ, ವಿಳಾಸ ಹಾಗೂ ಕುಟುಂಬದ ವಿವರಗಳಲ್ಲಿ ತಪ್ಪುಗಳಿದ್ದರೆ ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಈ ಹಿಂದೆ ದಾಖಲೆಗಳಲ್ಲಿನ ವ್ಯತ್ಯಾಸ ಹಾಗೂ ಜಾಗೃತಿಯ ಕೊರತೆಯಿಂದ ಅನೇಕ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿವೆ ಎಂದು ಅವರು ಎಚ್ಚರಿಸಿದರು.
ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಎಸ್‌ಐಆರ್ ಪ್ರಕ್ರಿಯೆ ವೇಳೆ ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳು ಮತ್ತು ಸಮರ್ಪಕ ಮಾಹಿತಿಯನ್ನು ಒದಗಿಸಿ ಸಹಕರಿಸುವ ಮೂಲಕ ತಮ್ಮ ಮತದಾರರ ಹಕ್ಕನ್ನು ಸುರಕ್ಷಿತಗೊಳಿಸಿಕೊಳ್ಳಬೇಕು ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ಕರೆ ನೀಡಿದರು.