Kalaburagi | ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ
ಯುವಕರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಕರೆ
ಕಲಬುರಗಿ: ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ, ಆರೋಗ್ಯಕರ ಹಾಗೂ ಮಾದಕ ಮುಕ್ತ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೆಬಿಎನ್ ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ ಹಾಗೂ ಖ್ವಾಜಾ ಬಂದನವಾಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕೆಬಿಎನ್ ವಿಶ್ವವಿದ್ಯಾಲಯದ ಅನಾಟಮಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪಿಐ ದಿಲೀಪ್ ಕುಮಾರ್ ಸಾಗರ್ ಹಾಗೂ ಸಹಾಯಕ ಪಿಎಸ್ಐ ಸಿಕಂದರ್ ಅವರು ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಕಾನೂನು ಸಂಬಂಧಿತ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಯುವಕರು ಕ್ಷಣಿಕ ಆಮಿಷಗಳಿಗೆ ಒಳಗಾಗದೆ ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಂಡು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಮಾದಕ ದ್ರವ್ಯ ಸೇವನೆ ವ್ಯಕ್ತಿಯ ಜೀವನ ಮಾತ್ರವಲ್ಲದೆ ಕುಟುಂಬ ಮತ್ತು ಸಮಾಜದ ಮೇಲೂ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಭಾಗವಹಿಸಿ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಬಿಎನ್ ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ಡಾ. ಗಜಾಲಾ ಶೈರೀನ್, ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ಡೀನ್ ಡಾ. ಗುರುಪ್ರಸಾದ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಅನುಪ್ ದೇಸಾಯಿ ಹಾಗೂ ವೈದ್ಯಕೀಯ ವಿಜ್ಞಾನ ವಿಭಾಗದ ಸಹಾಯಕ ಡೀನ್ ಡಾ. ಗೀತಾಂಜಲಿ ಉಪಸ್ಥಿತರಿದ್ದರು.