×
Ad

ಯಡ್ರಾಮಿ | ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರ ಪ್ರತಿಭಟನೆ

Update: 2026-07-02 19:02 IST

ಯಡ್ರಾಮಿ: ತಾಲೂಕಿನ ಕಾಚಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಅದಕ್ಕೆ ತಕ್ಷಣ ಕಡಿವಾಣ ಹಾಕುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಕಿರಾಣಿ ಅಂಗಡಿಗಳು, ಪಾನ್ ಶಾಪ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ಮಹಿಳೆಯರು ಹಾಗೂ ಮಕ್ಕಳ ಬದುಕಿನ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ಕಳೆದ ಒಂದು ವರ್ಷದಿಂದ ಹಲವು ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ ಅವರು, ಅಬಕಾರಿ ಅಧಿಕಾರಿಗಳು ಪರಿಶೀಲನೆಗೆ ಬರುವ ಮುನ್ನವೇ ಕೆಲವು ಅಂಗಡಿಗಳನ್ನು ಮುಚ್ಚಲಾಗುತ್ತದೆ ಅಥವಾ ಮದ್ಯವನ್ನು ಬೇರೆಡೆಗೆ ಸಾಗಿಸಲಾಗುತ್ತದೆ. ಇದರಿಂದ ದಾಳಿಗಳು ಫಲಪ್ರದವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಬಕಾರಿ ಇಲಾಖೆ ದಾಳಿಯ ಮಾಹಿತಿ ಮುಂಚಿತವಾಗಿಯೇ ಅಕ್ರಮ ಮದ್ಯ ಮಾರಾಟಗಾರರಿಗೆ ಸೋರಿಕೆಯಾಗುತ್ತಿದೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ ಗ್ರಾಮಸ್ಥರು, ತಾಲೂಕು ದಂಡಾಧಿಕಾರಿಗಳು ಹಾಗೂ ಜಿಲ್ಲಾ ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಡಿವಾಳಮ್ಮ, ಭೀಮಬಾಯಿ, ಶರಣಮ್ಮ, ಅನ್ನಪೂರ್ಣ, ಲಕ್ಷ್ಮೀಬಾಯಿ, ದೇವಮ್ಮ, ಗೀತಾ, ರಾಯಮ್ಮ, ಶಾರದಾ, ಚಂದಮ್ಮ, ಮಾಣಿಕಮ್ಮ, ಮಲ್ಲಮ್ಮ, ಸಾವಿತ್ರಿ, ಸಾಥಮ್ಮ, ಈರಮ್ಮ, ಪಾರ್ವತಿ, ಕಾಶಿಬಾಯಿ, ದೇವಕ್ಕಿ, ಶಿವಬಾಯಿ, ಯಲ್ಲಮ್ಮ ಸೇರಿದಂತೆ ಅನೇಕ ಮಹಿಳೆಯರು ಇದ್ದರು.

ಕಾಚಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೂಲಿ ಮಾಡಿ ಗಳಿಸುವ ಹಣ ಮದ್ಯಕ್ಕೆ ಖರ್ಚಾಗುತ್ತಿರುವುದರಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮಹಿಳೆಯರ ದುಃಖ ಹೆಚ್ಚಾಗುತ್ತಿದ್ದು, ಕಾಲೇಜು ವಿದ್ಯಾರ್ಥಿಗಳೂ ಕುಡಿತದ ಚಟಕ್ಕೆ ಒಳಗಾಗುತ್ತಿರುವುದು ಆತಂಕಕಾರಿ. ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು.

-ಗಂಗಮ್ಮ, ಕಾಚಾಪುರ ನಿವಾಸಿ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News