×
Ad

ಆಳಂದ ಅಮೃತ್ 2.0 ಯೋಜನೆ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳಿಸಿ : ಡಿಸಿ ಇಕ್ರಮ್ ಶರೀಫ್ ಸೂಚನೆ

Update: 2026-05-23 19:09 IST

ಆಳಂದ : ಪಟ್ಟಣದ ಜನತೆಗೆ ಬಹುಕಾಲದ ನಿರೀಕ್ಷೆಯಾಗಿರುವ ಕುಡಿಯುವ ನೀರಿನ ಮಹತ್ವಾಕಾಂಕ್ಷಿ ಅಮೃತ್ 2.0 ಯೋಜನೆಯ ಕಾಮಗಾರಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಶನಿವಾರ ವಿವಿಧ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಿಗದಿತ ಅವಧಿ ಕಳೆದರೂ ಯೋಜನೆ ಪೂರ್ಣಗೊಳ್ಳದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮುಂದಿನ ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಿದರು.

ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಅಮರ್ಜಾ ಅಣೆಕಟ್ಟೆಯಿಂದ ಆಳಂದ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಕೈಗೊಳ್ಳಲಾಗಿದ್ದು, ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದರೂ ಇನ್ನೂ ಶೇ.30ರಷ್ಟು ಕೆಲಸ ಬಾಕಿಯಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು. ಯೋಜನೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಆಶ್ರಯ ಕಾಲೋನಿಯ ಜಲಶುದ್ಧೀಕರಣ ಘಟಕ, ಅಮರ್ಜಾ ಅಣೆಕಟ್ಟೆ ಬಳಿಯ ಜಾಕ್‌ವೆಲ್ ನಿರ್ಮಾಣ, ಹೆಬಳಿ ರಸ್ತೆಯ ನೀರಿನ ಟ್ಯಾಂಕ್ ಹಾಗೂ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಗಳನ್ನು ವೀಕ್ಷಿಸಿದರು.

ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸಿದ ಅವರು, ಜನರಿಗೆ ತೊಂದರೆ ಆಗದಂತೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಧಿಕಾರಿಗಳ ಮಾಹಿತಿ ಪ್ರಕಾರ, ಯೋಜನೆ 22-05-2024ರಂದು ಆರಂಭಗೊಂಡಿದ್ದು, 22-05-2025ಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬಗೊಂಡಿದ್ದು, ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ಪಡೆಯಲಾಗಿದೆ. ಈಗಾಗಲೇ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಯೋಜನೆಯಡಿ ಅಮರ್ಜಾ ಅಣೆಕಟ್ಟೆಯಲ್ಲಿ ಇನ್‌ಟೇಕ್ ವೆಲ್, ಜಾಕ್‌ವೆಲ್, ಕಚ್ಚಾ ನೀರಿನ ಪೈಪ್‌ಲೈನ್, ಪಂಪ್‌ಹೌಸ್, ಫುಟ್‌ಬ್ರಿಡ್ಜ್, ಜಲಶುದ್ಧೀಕರಣ ಘಟಕ, ವಿವಿಧ ಮೇಲ್ಮಟ್ಟದ ಜಲಸಂಗ್ರಹಾಗಾರಗಳು, 101 ಕಿ.ಮೀ ಉದ್ದದ ವಿತರಣಾ ಜಾಲ, 11 ಸಾವಿರ ಮನೆಗಳಿಗೆ ಮೀಟರ್ ಸಹಿತ ನಳ ಸಂಪರ್ಕ ಹಾಗೂ ಆನ್‌ಲೈನ್ ಮಾನಿಟರಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿವೆ.

2040ರ ವೇಳೆಗೆ 58 ಸಾವಿರ ಹಾಗೂ 2055ರ ವೇಳೆಗೆ 68 ಸಾವಿರ ಜನಸಂಖ್ಯೆಯನ್ನು ಪರಿಗಣಿಸಿ ತಲಾ 135 ಲೀಟರ್ ನೀರು ಪೂರೈಸುವ ಗುರಿಯೊಂದಿಗೆ ಯೋಜನೆ ರೂಪಿಸಲಾಗಿದೆ. ಒಟ್ಟು 86.02 ಕೋಟಿ ರೂ. ವೆಚ್ಚದ ಈ ಯೋಜನೆಗೆ 23-05-2024ರಂದು ಗುತ್ತಿಗೆ ನೀಡಲಾಗಿದ್ದು, ಬಳಿಕ ಕಾಮಗಾರಿ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.                                                                                                       

ಪರಿಶೀಲನೆ ವೇಳೆ ಸಹಾಯಕ ಆಯುಕ್ತೆ ಸಾಹಿತ್ಯ ಅಲದಕಟ್ಟಿ, ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ, ಪಿಡಿ ಮುನ್ನಾವರ ದೌಲಾ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಜೆಇ ಜಗದೀಶ ಸ್ವಾಮಿ, ಜಲಮಂಡಳಿ ಕಾರ್ಯಪಾಲಕ ಅಭಿಯಂತರ ಸಂಜಯ ಡಿ.ಎಂ., ಸಹಾಯಕ ಅಧಿಕಾರಿ ಎಚ್.ಎಂ. ಸ್ವಾಮಿ ಹಾಗೂ ಪಿಯುಸ್ ಪಾಟೀಲ ಉಪಸ್ಥಿತರಿದ್ದರು. ಆರ್.ಕೆ.ಪಾಟೀಲ ಅವರು ನೀರಿನ ಸಮಸ್ಯೆ ತಲೆದೊರಿದೆ.ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ತ್ವರಿತ ಕಾಮಗಾರಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News