ರಾಜ್ಯದಲ್ಲಿ ಕಾಂಗ್ರೆಸ್ ಅಲ್ಲ, ತಾಲಿಬಾನ್ ಸರಕಾರ ಇದೆ : ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್
ಕಲಬುರಗಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲ, ಬದಲಾಗಿ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮಠಾಧೀಶರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯದ ಸರ್ಕಾರ, ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದು ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಿತಿ ಮೀರಿದ್ದು, ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅನುಮತಿ ನೀಡಿರುವುದು ಅದಕ್ಕೆ ಉದಾಹರಣೆ ಎಂದು ಆರೋಪಿಸಿದರು. ರಾಜ್ಯದ ಜನತೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಧ್ಯ ಪ್ರಾಚ್ಯದ ಸಂಘರ್ಷದ ಹಿನ್ನೆಲೆ ದೇಶದ ಹಿತದೃಷ್ಟಿಯಿಂದ ತೈಲ ಉತ್ಪನ್ನಗಳ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಸಂದರ್ಭದಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಆ ನಿರ್ಧಾರವನ್ನು ಹಗುರವಾಗಿ ಪರಿಗಣಿಸಿರುವುದು ಸರಿಯಲ್ಲ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ವಿದೇಶ ಪ್ರವಾಸವನ್ನು ಟೀಕಿಸುವವರ ವಿರುದ್ಧ ಪ್ರತಿಕ್ರಿಯಿಸಿದ ಅವರು, ವಿದೇಶಕ್ಕೆ ಸುಮ್ಮನೆ ಹೋಗುವುದಿಲ್ಲ, ಅಲ್ಲಿ ಹಲವು ಯೋಜನೆಗಳಿಗೆ ಸಹಿ ಹಾಕಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ಮುಖಂಡರಾದ ಲಿಂಗರಾಜ ಬಿರಾದಾರ, ಚಂದ್ರಶೇಖರ ಪಸರರೆಡ್ಡಿ, ಸಚಿನ ಕಡಗಂಚಿ, ಮಹೇಂದ್ರ ಪೂಜಾರಿ, ಮಲ್ಲಿಕಾರ್ಜುನ ಇಟಗಿ, ಬಾಬುರಾವ್ ಹಾಗರಗುಂಡಗಿ ಸೇರಿದಂತೆ ಇತರರು ಇದ್ದರು.