ವಾಡಿ: ಪಟ್ಟಣದಿಂದ ಇಂಗಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಮತ್ತು ರಸ್ತೆ ಬದಿಯಲ್ಲಿ ಅಳವಡಿಸಲಾಗಿರುವ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಇಂಗಳಗಿ ಗ್ರಾಮದ ಮುಖಂಡರ ನಿಯೋಗವು ಎಸಿಸಿ ಅದಾನಿ ಸಿಮೆಂಟ್ ಕಂಪನಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.

ವಾಡಿಯಿಂದ ಇಂಗಳಗಿ ಗ್ರಾಮದವರೆಗೆ ಸುಮಾರು 8.2 ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಮಧ್ಯೆ ಮತ್ತು ರಸ್ತೆ ಬದಿಯಲ್ಲಿ ಕಂಪನಿಗೆ ಸೇರಿದ ವಿದ್ಯುತ್ ಕಂಬಗಳು ಇರುವುದರಿಂದ ಕಾಮಗಾರಿಗೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಸಂಬಂಧಿಸಿದ ಇಲಾಖೆಯಿಂದ ಈಗಾಗಲೇ ಕಂಪನಿಗೆ ಪತ್ರ ಬರೆಯಲಾಗಿದೆ. ಆದರೂ ಇದುವರೆಗೆ ಕಂಬಗಳನ್ನು ತೆರವುಗೊಳಿಸದಿರುವುದರಿಂದ ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲು ತೊಂದರೆಯಾಗುತ್ತಿದೆ ಎಂದು ಪಿಎಂಜಿಎಸ್‌ವೈ ಎಇಇ ಶ್ಯಾಮ ಬಿರೆದಾರ್ ತಿಳಿಸಿದ್ದಾರೆ.

ಈ ಕುರಿತು ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರಸ್ತೆ ಕಾಮಗಾರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಇದಲ್ಲದೆ, ಕ್ವಾರಿ ಸಮೀಪದ ರಸ್ತೆಯಲ್ಲಿ ನಡೆಯುತ್ತಿರುವ ನೀರಿನ ಪೈಪ್‌ಲೈನ್ ಕಾಮಗಾರಿಯೂ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ಅಗತ್ಯವಿದ್ದರೆ ಪೈಪ್‌ಲೈನ್ ಸ್ಥಳಾಂತರಿಸಿ ಸಿಮೆಂಟ್ ರಸ್ತೆ ಕಾಮಗಾರಿಗೆ ಸಹಕರಿಸಬೇಕು. ಇಲ್ಲವಾದರೆ ಎಸಿಸಿ ಅದಾನಿ ಸಿಮೆಂಟ್ ಕಂಪನಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಮನವಿ ಸಲ್ಲಿಸಿದ ನಿಯೋಗದಲ್ಲಿ ಬಸವರಾಜ ಸ್ಥಾವರಮಠ, ಗೌಸ ದುದ್ದನಿ, ಸುಭಾಷ್ಚಂದ್ರ ಯಾಮೆರ್, ಚಂದ್ರಕಾಂತ ಹೂಗಾರ್, ಡಾ. ಸಾಯಬಣ್ಣ ಗುಡುಬಾ, ಡಾ. ಮೋಹನ ಪವಾರ್, ಸಂಗಣ್ಣಗೌಡ ಬಿರೆದಾರ, ವಿಶಾಲ ಪಾಟೀಲ, ರಾಜು ಕೊರಬಾ, ದಾವೂದ ಇಜೇರಿ, ಮೋದಿನ್ ಕ್ಯಾಶವರ, ಶಿವಶರಣಪ್ಪ ತೆಳಗೆರಿ, ಭೀಮು ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor