Kalaburagi | 20 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಪೋಲಿಸ್ ಸಿಬ್ಬಂದಿಗಳು
ಕಲಬುರಗಿ: ಆರೋಪಿಯನ್ನು ಗಡಿಪಾರು ಮಾಡುವುದಾಗಿ ಬೆದರಿಸಿ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಬ್ರಹ್ಮಪುರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳು ಲೋಕಾಯುಕ್ತ ಪೊಲೀಸರು ಬಲೆಗೆ ಬಿದ್ದಿದ್ದಾರೆ.
ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್‌ಗಳಾದ ಪರಶುರಾಮ್ ಹಾಗೂ ವೀರೇಶ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳಾಗಿದ್ದಾರೆ.
ಬಾಪುನಗರ ನಿವಾಸಿ ಕನ್ನ ರಾಜು ಪಾಟೀಲ್ ಅವರು ನೀಡಿದ ದೂರಿನ ಪ್ರಕಾರ, ಆರೋಪಿತ ಪೊಲೀಸ್ ಸಿಬ್ಬಂದಿ ಆಗಾಗ್ಗೆ ಅವರ ಮನೆಗೆ ಬಂದು ಪುತ್ರ ಕಾರ್ತಿಕ್ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಬೆದರಿಸುತ್ತಿದ್ದರು. ಅಲ್ಲದೆ, ಕಾರ್ತಿಕ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿ ರಾತ್ರಿ ವೇಳೆಯವರೆಗೆ ಇರಿಸಿ ಗಡಿಪಾರು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರುದಾರರ ಪ್ರಕಾರ, ಮೊದಲಿಗೆ ಆರೋಪಿಗಳು ಒಟ್ಟು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 50 ಸಾವಿರ ರೂ. ಪಡೆದಿದ್ದರು. ಬಳಿಕ ಮತ್ತೆ 20 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆರೋಪಿತ ಸಿಬ್ಬಂದಿ 20 ಸಾವಿರ ರೂ. ನಗದು ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.