ಕಾಳಗಿ | ಅಂಬಿಗರ ಚೌಡಯ್ಯ ಭಾವಚಿತ್ರ ಅವಮಾನ ಖಂಡಿಸಿ ರಸ್ತೆ ಬಂದ್, ಟಯರ್ ಸುಟ್ಟು ಪ್ರತಿಭಟನೆ
ಕಾಳಗಿ: ಪಟ್ಟಣದ ಚಿಂಚೋಳಿ–ಕಲಬುರಗಿ ರಾಜ್ಯ ಹೆದ್ದಾರಿಯ ಹೊಸ ಬಸ್ ನಿಲ್ದಾಣ ರಸ್ತೆಯ ವಿಭಜಕದಲ್ಲಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರವನ್ನು ಹರಿದು ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಕೋಲಿ ಸಮಾಜದ ಮುಖಂಡರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕೋಲಿ ಸಮಾಜದ ನೇತೃತ್ವದಲ್ಲಿ ಚಿಂಚೋಳಿ–ಕಲಬುರಗಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಟಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕೋಲಿ ಸಮಾಜದ ಅಧ್ಯಕ್ಷ ಜಗನ್ನಾಥ ತೇಲಿ, ಯುವ ಘಟಕದ ಅಧ್ಯಕ್ಷ ಪ್ರವೀಣ್ ನಾಮದಾರ, ಶಿವಕುಮಾರ್ ಕಮಕನೂರ, ಸಿದ್ದು ಕೇಶ್ವಾರ, ಭೀಮರಾಯ ಮಲಘಾಣ, ಗುಂಡಪ್ಪ ಕರೆಮನೊರ, ಮಲ್ಲಿಕಾರ್ಜುನ ಮರಗುತ್ತಿ ಹಾಗೂ ನಾಗಣ್ಣ ಕಮಕನೂರ, ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಫಲಕ ಹರಿದು ಹಾಕಿರುವ ದುಷ್ಕೃತ್ಯ ಖಂಡನೀಯವಾಗಿದ್ದು, ಇಡೀ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾವಚಿತ್ರವನ್ನು ಅವಮಾನಿಸಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು. ಸಮಾಜದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಇಂತಹ ಘಟನೆಗಳು ಮರುಕಳಿಸದಂತೆ ಶರಣರ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯ ವೇಳೆ ನಿಜಶರಣ ಅಂಬಿಗರ ಚೌಡಯ್ಯ ಅವರ ಫಲಕಕ್ಕೆ ಹೊಸ ಭಾವಚಿತ್ರವನ್ನು ಅಳವಡಿಸಿ, ಕಿಡಿಗೇಡಿಗಳನ್ನು ಬಂಧಿಸುವುದರ ಜೊತೆಗೆ ಈ ವೃತ್ತವನ್ನು ‘ಅಂಬಿಗರ ಚೌಡಯ್ಯ ವೃತ್ತ’ ಎಂದು ಘೋಷಿಸಬೇಕು ಎಂದು ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು ಎರಡು ಗಂಟೆಗಳ ಕಾಲ ಮಾನವ ಸರಪಳಿ ರಚಿಸಿ ಟೈಯರ್ ಸುಟ್ಟು ಪ್ರತಿಭಟನೆ ನಡೆಸಿದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ನೂರಾರು ವಾಹನಗಳು ಸಾಲುಗಟ್ಟಿ ನಿಂತವು. ಇದರಿಂದ ಸಾರ್ವಜನಿಕರು ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ರೋಹನ್ ರವಿರಾಜ ಕೊರವಿ, ಸಾಯಿಪ್ರಟಕಲ್ ರಟಕಲ್, ಶಿವರಾಯ ಕೊಯಿ, ರತ್ಮಮ್ಮ ಡೊಣ್ಣೂರ, ಜಗನ್ನಾಥ ಚಂದನಕೇರಿ, ಪ್ರಭಾಕಾರ ರಟಕಲ್, ಕಿರಣ ನಾಮದಾರ, ನೀಲಕಂಠ ಚಿಮ್ಮಾಇದಲಾಯಿ, ಅರುಣ ನಾಮದಾರ, ರೇವಣಸಿದ್ಧ ಚೆಂಗಟಿ, ರೇವಣಸಿದ್ಧ ಪೂಜಾರಿ, ಅರ್ಜುನ, ಸುಂದರ ಸಾಗರ, ಮಲ್ಲಿಕಾರ್ಜುನ ಸಿಂಘೆ, ಭೀಮಾಶಂಕರ ಹಲಚೇರಾ, ಗೀರಿಶಕುಮಾರ ಕೇರಳ್ಳಿ, ಕಾಶಿನಾಥ ರಾಜಾಪೂರ, ಜಗನ್ನಾಥ ಮಗಿ, ಸುನೀಲಕುಮಾರ ಕಡಬೂರ, ಚಂದ್ರಕಾಂತ ಬಂಕಲಗಿ, ಪೀರಪ್ಪ ನಾಟೀಕಾರ ಇದ್ದರು. ಪಿಎಸ್ಐ ತಿಮ್ಮಯ್ಯ ಬಿ.ಕೆ ಪೊಲೀಸ್ ಬಂದೋಬಸ್ತ್ ಮಾಡಿದರು.