×
Ad

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ : ಪ್ರೊ. ವಾಮನ ಗಾಜ್ರೆ

Update: 2026-05-26 19:21 IST

ಕಲಬುರಗಿ: ಇಂದಿನ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಭಾವನಾತ್ಮಕ ಬದುಕಿಗಿಂತ ಪ್ರಾಯೋಗಿಕ ಹಾಗೂ ವೈಚಾರಿಕ ಬದುಕು ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸೇಡಂ ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ವಾಮನ ಗಾಜರೆ ಹೇಳಿದರು.

ನಗರದ ನೂತನ ವಿದ್ಯಾಲಯದ ರಸಾಯನಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವೈಜ್ಞಾನಿಕ ಚಿಂತನೆ ವ್ಯಕ್ತಿಯ ತಾರ್ಕಿಕ ಸಾಮರ್ಥ್ಯವನ್ನು ವೃದ್ಧಿಸುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ಪ್ರಯೋಗಾತ್ಮಕ ಅಧ್ಯಯನ, ಸಂಶೋಧನಾ ಮನೋವೃತ್ತಿ ಮತ್ತು ನವೀನ ಆವಿಷ್ಕಾರಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗೌರವ ಉಪಸ್ಥಿತರಾಗಿ ಮಾತನಾಡಿದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಯುಜಿ ಸರದೇಶಪಾಂಡೆ, ಗೃಹ ವಿಜ್ಞಾನ, ಪೌಷ್ಟಿಕಾಂಶ, ಆಹಾರ ಸಂರಕ್ಷಣೆ ಹಾಗೂ ಆರೋಗ್ಯ ವಿಜ್ಞಾನಗಳ ಮಹತ್ವವನ್ನು ವಿವರಿಸಿದರು.

ಮಹಾವಿದ್ಯಾಲಯದ ನಿರ್ದೇಶಕ ಗೋವಿಂದ ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಜ್ಞಾನ ಮೇಳದಲ್ಲಿ ಸುಮಾರು 20 ವಿದ್ಯಾರ್ಥಿಗಳು ವೈಜ್ಞಾನಿಕ ಮಾದರಿಗಳು, ರಾಸಾಯನಿಕ ಪ್ರತಿಕ್ರಿಯೆಗಳು, ಶಕ್ತಿ ಪರಿವರ್ತನೆ, ಪರಿಸರ ಸಂರಕ್ಷಣೆ ಹಾಗೂ ಜಲಶುದ್ಧೀಕರಣ ಸೇರಿದಂತೆ ವಿವಿಧ ವಿಷಯಾಧಾರಿತ ಪ್ರಯೋಗಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಗೌತಮ ಜಾಹಗಿರದಾರ ಹಾಗೂ ಸಂಸ್ಥೆಯ ಸದಸ್ಯರು ಮೇಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ವೈಜ್ಞಾನಿಕ ಮಾದರಿಗಳು ಮತ್ತು ಪ್ರಯೋಗಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ನಂದಿನಿ ಪ್ರಾರ್ಥನಾ ಗೀತೆ ಹಾಡಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮದ ಆಯೋಜಕರಾದ ಡಾ. ಅಶ್ವಿನಿ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಭಾರತಿ ಎಸ್.ಆರ್. ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News