ಆಳಂದ : ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಜಾತ್ಯತೀತ ಮೌಲ್ಯಗಳನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಆಳಂದದಲ್ಲಿ ಭಾನುವಾರ ಸಭೆ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಮಾತನಾಡಿ, ಹೊಸ ರಾಜಕೀಯ ಪಕ್ಷದ ಅಧಿಕೃತ ಘೋಷಣೆಯನ್ನು ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸುಮಾರು 25 ಸಾವಿರ ಜನರನ್ನು ಸೇರಿಸಿ ಪಕ್ಷದ ಚಿಹ್ನೆ ಹಾಗೂ ಭಾವುಟವನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ. ಹೊಸ ಪಕ್ಷವು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲ ವರ್ಗಗಳ ಹಕ್ಕುಗಳು, ಸಮಾನ ಅವಕಾಶಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ವೇದಿಕೆಯಾಗಲಿದೆ ಎಂದು ಹೇಳಿದರು.

ಸಂವಿಧಾನದ ಆಶಯಗಳನ್ನು ಜನರ ನಡುವೆ ಬಲಪಡಿಸುವುದು ಹಾಗೂ ಜನಪರ ರಾಜಕೀಯಕ್ಕೆ ಹೊಸ ದಿಕ್ಕು ನೀಡುವುದು ಪಕ್ಷದ ಪ್ರಮುಖ ಉದ್ದೇಶವಾಗಿರಲಿದೆ ಎಂದು ಚೇತನ್ ಅಹಿಂಸಾ ತಿಳಿಸಿದರು.

ಸಭೆಯಲ್ಲಿ ಆಳಂದ ತಾಲೂಕಿನ ಮೂಲಭೂತ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ನ್ಯಾಯ ಹಾಗೂ ಜನಪರ ಹೋರಾಟಗಳ ರೂಪುರೇಷೆಗಳ ಕುರಿತು ಚರ್ಚೆ ನಡೆಯಿತು. ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿ ಸಂಘಟಿತ ಹೋರಾಟ ರೂಪಿಸುವ ಬಗ್ಗೆ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಭೆಯಲ್ಲಿ ಮಲ್ಲಿಕಾರ್ಜುನ ಶ್ರೀಂಗೇರಿ, ಲಕ್ಷ್ಮೀಕಾಂತ ಭಜನ, ಮಹಾದೇವ ಕಾಂಬಳೆ, ಬಾಬುರಾವ್ ಬೀಳಗಿ, ಅಂಬೇಶ ದೇವನೂರ, ರಫೀಕ್ ಕಿಂಗ್, ರಫೀಕ್ ಮುಲ್ಲಾ, ಯು.ಕೆ. ಇನಾಮದಾರ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳ ಯುವ ಮುಖಂಡರು, ಸಾಮಾಜಿಕ ಹೋರಾಟಗಾರರು, ವಿಚಾರವಂತರು ಹಾಗೂ ಸಮಾನ ಮನಸ್ಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor