Kalaburagi | ಕಂದಾಯ ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ರಿತಿಕಾ ವರ್ಮಾ ನೇಮಕ
ಕಲಬುರಗಿ, ಸೆ. 8: ಕಲಬುರಗಿ ಕಂದಾಯ ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ 2024ರ ಐಎಎಸ್ ಬ್ಯಾಚ್‌ನ ಅಧಿಕಾರಿ ರಿತಿಕಾ ವರ್ಮಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಈ ಕುರಿತು ಸೋಮವಾರ ಸರ್ಕಾರ ಆದೇಶ ಹೊರಡಿಸಿದ್ದು, ಸಹಾಯಕ ಆಯುಕ್ತರಾಗಿದ್ದ ಸಾಹಿತ್ಯ ಆಲದಕಟ್ಟಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಹುದ್ದೆಗೆ ರಿತಿಕಾ ವರ್ಮಾ ಅವರನ್ನು ನಿಯೋಜಿಸಲಾಗಿದೆ.
ಸಾಹಿತ್ಯ ಆಲದಕಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಅವರ ವರ್ಗಾವಣೆಯ ಬಳಿಕ ಇದೀಗ ರಾಜ್ಯ ಸರ್ಕಾರ ಮತ್ತೋರ್ವ ಮಹಿಳಾ ಐಎಎಸ್ ಅಧಿಕಾರಿಯನ್ನು ಕಲಬುರಗಿಗೆ ನೇಮಿಸಿದೆ.
ರಿತಿಕಾ ವರ್ಮಾ ಅವರು ಶೀಘ್ರದಲ್ಲೇ ಕಲಬುರಗಿ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.