ಕಲಬುರಗಿ : ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಕಲಬುರಗಿ ಇಎಸ್ಐ ಆಸ್ಪತ್ರೆಯನ್ನು ನೋಂದಣಿ ಮಾಡಿ, ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸುವಂತೆ ಕಲಬುರಗಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಮನವಿ ಸಲ್ಲಿಸಿದೆ.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳುಂಡಗಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸೋಮವಾರ ಇಎಸ್ಐ ಆಸ್ಪತ್ರೆಯ ಡೀನ್ ಡಾ. ಧನಾಜಿ ಜಾದವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಆರೋಗ್ಯ ಸಂಜೀವಿನಿ ಯೋಜನೆಯಡಿ ಆಸ್ಪತ್ರೆ ನೋಂದಣಿಯಾದರೆ ಜಿಲ್ಲೆಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಮನವಿಗೆ ಸ್ಪಂದಿಸಿದ ಡೀನ್ ಡಾ. ಧನಾಜಿ ಜಾದವ್, ಇಎಸ್ಐ ಆಸ್ಪತ್ರೆಯನ್ನು ಆರೋಗ್ಯ ಸಂಜೀವಿನಿ ಯೋಜನೆಯಡಿ ಶೀಘ್ರದಲ್ಲೇ ನೋಂದಣಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಚಂದ್ರಕಾಂತ ಏರಿ, ಧರ್ಮರಾಜ ಜವಳಿ, ಕೃಷ್ಣಚಾರಿ, ಸಿದ್ದಲಿಂಗಯ್ಯ ಮಠಪತಿ, ಅಣ್ಣಾರಾವ ಹಾಬಾಳಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor