×
Ad

ಯಡ್ರಾಮಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜಯಂತ್ಯೋತ್ಸವ

ಭಾವಚಿತ್ರ ಮೆರವಣಿಗೆ, ಉಚಿತ ಆರೋಗ್ಯ ಶಿಬಿರ, ರಕ್ತದಾನ, ಬಹಿರಂಗ ಸಭೆ

Update: 2026-07-10 18:57 IST

ಯಡ್ರಾಮಿ, ಜು.11: ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಉತ್ಸವ ಸಮಿತಿ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವವನ್ನು ಶುಕ್ರವಾರ ಸಂಭ್ರಮ, ಶ್ರದ್ಧೆ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ಜಯಂತ್ಯೋತ್ಸವದ ಅಂಗವಾಗಿ ಸರದಾರ ಶರಣಗೌಡ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬುದ್ಧ, ಬಸವ ಹಾಗೂ ಡಾ. ಅಂಬೇಡ್ಕರ್ ಅವರ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿ ಜಯಘೋಷ ಮೊಳಗಿಸಿದರು.

ಜಯಂತಿ ಪ್ರಯುಕ್ತ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಆಯ್ಕೆ ಶಿಬಿರ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

ಸಂಜೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ನಡೆದ ಬಹಿರಂಗ ಸಭೆಯಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿ, ಡಾ. ಅಂಬೇಡ್ಕರ್ ಅವರ ಜೀವನ, ಹೋರಾಟ, ಸಾಮಾಜಿಕ ನ್ಯಾಯದ ಚಿಂತನೆಗಳು ಹಾಗೂ ಭಾರತೀಯ ಸಂವಿಧಾನಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವೈಶಾಲಿ ಬುದ್ಧವಿಹಾರ (ಆಣದೂರು, ಬೀದರ್)ದ ಪೂಜ್ಯ ಭಂತೆ ವರಜ್ಯೋತಿ, ಉರಿಲಿಂಗ ಪೆದ್ದಿ ಸಂಸ್ಥಾನ ಮಠ (ಮೈಸೂರು)ದ ಡಾ. ಜ್ಞಾನಪ್ರಕಾಶ ಸ್ವಾಮೀಜಿ, ಕಡಕೊಳ ಮಹಾಸಂಸ್ಥಾನ ಮಠದ ಪೂಜ್ಯ ಡಾ. ರುದ್ರಮುನಿ ಶಿವಾಚಾರ್ಯರು, ಯಡ್ರಾಮಿ ವಿರಕ್ತಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಚಿಗರಳ್ಳಿ ಗುರುಪೀಠದ ಪೂಜ್ಯರು ಹಾಗೂ ಸಿದ್ದಬಸವ ಕಬೀರಾನಂದ ಮಹಾಸ್ವಾಮಿಗಳು ವಹಿಸಿದ್ದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಕೇದಾರಲಿಂಗಯ್ಯ ಹಿರೇಮಠ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಾಂತಪ್ಪ ಕೂಡಲಗಿ, ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಗುರಣ್ಣ ಜಿ. ದೊಡ್ಡಮನಿ ಕಾಚಾಪೂರ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಸವರಾಜ ಹೊಸಮನಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News