×
Ad

Aland | ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಜನಪರ ಹೋರಾಟ ತೀವ್ರಗೊಳಿಸಿ : ಮಹೇಶ್ವರಿ ವಾಲಿಗೆ ಎಚ್‌ಡಿಕೆ ಸಲಹೆ

Update: 2026-07-10 18:09 IST

ಆಳಂದ, ಜು.10: ತಾಲೂಕಿನ ವಿವಿಧ ಜನಪರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟವನ್ನು ಇನ್ನಷ್ಟು ಸಂಘಟಿತವಾಗಿ ಹಾಗೂ ತೀವ್ರವಾಗಿ ಮುಂದುವರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಲಬುರಗಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರಿಗೆ ಸಲಹೆ ನೀಡಿದರು.

ಗುರುವಾರ ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಮಹೇಶ್ವರಿ ವಾಲಿ, ಆಳಂದ ತಾಲೂಕಿನ ಕುಡಿಯುವ ನೀರು, ಮೂಲಸೌಕರ್ಯ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಜನತೆ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ತಾಲೂಕಿನ ಜನರ ಹಿತಾಸಕ್ತಿಗಾಗಿ ಕೈಗೊಂಡಿರುವ ಹೋರಾಟಗಳ ಕುರಿತು ವಿವರಿಸಿದ ಅವರು, ಭ್ರಷ್ಟಾಚಾರ ನಿರ್ಮೂಲನೆ, ಸಾರಾಯಿ ಮುಕ್ತ ಸಮಾಜ ನಿರ್ಮಾಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಒತ್ತಾಯಿಸಿ ಹಂತ ಹಂತವಾಗಿ ಜನಾಂದೋಲನ ರೂಪಿಸುವ ಯೋಜನೆ ಕುರಿತು ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲಿ ಮಹಿಳೆಯರ ಗೌರವ ಮತ್ತು ಸುರಕ್ಷತೆಗೆ ಸಾರ್ವಜನಿಕ ಶೌಚಾಲಯಗಳ ಕೊರತೆ ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ಜನಜಾಗೃತಿ ಮೂಡಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಹೋರಾಟ ನಡೆಸಲಾಗುವುದು ಎಂದು ಮಹೇಶ್ವರಿ ವಾಲಿ ತಿಳಿಸಿದರು.

ಆಳಂದ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಕೇಂದ್ರ ಸಚಿವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ ಅವರು, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷದ ವತಿಯಿಂದ ನಿರಂತರ ಹೋರಾಟ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಜನಪರ ಹೋರಾಟಗಳು ಶಾಂತಿಯುತ ಹಾಗೂ ಪರಿಣಾಮಕಾರಿಯಾಗಿ ನಡೆಯಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡಿ ನಿರಂತರವಾಗಿ ಧ್ವನಿಯಾಗಬೇಕು ಎಂದು ಮಹೇಶ್ವರಿ ವಾಲಿಗೆ ಸಲಹೆ ನೀಡಿದರು. ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಸೂಕ್ತ ಮಟ್ಟದಲ್ಲಿ ಪರಿಗಣಿಸುವ ಭರವಸೆಯನ್ನೂ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News